ನಾನೊಬ್ಬ ಸ್ಪೀಕರ್, ಪೋಸ್ಟ್ ಮ್ಯಾನ್ ಅಲ್ಲ ಎಂದ ರಮೇಶ್ ಕುಮಾರ್ !
ಬೆಂಗಳೂರು, ಜು.2: ಗೋಕಾಕ್ ಕ್ಷೇತ್ರದ ಶಾಸಕ ಸ್ಥಾನಕ್ಕೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಕೊಟ್ಟಿದ್ದೇನೆ ಎಂದು ಹೇಳಿಕೆ ಕೊಟ್ಟಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಪೀಕರ್ ರಮೇಶ್ ಕುಮಾರ್, ನಾನೊಬ್ಬ ಸ್ಪೀಕರ್, ಪೋಸ್ಟ್ ಮ್ಯಾನ್ ಅಲ್ಲ ಎಂದರು.
ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಫ್ಯಾಕ್ಸ್ ಮೂಲಕ ಕಳುಹಿಸಿರುವ ರಾಜೀನಾಮೆ ಸ್ವೀಕರಿಸೋಕೆ ನಾನು ಪೋಸ್ಟಲ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿಲ್ಲ. ಯಾರ ದೊಡ್ಡಸ್ತಿಕೆಯೂ ಇಲ್ಲಿ ನಡೆಯುವುದಿಲ್ಲ. ನಿಯಮಾವಳಿಗಳು ಮಾತ್ರ ಇಲ್ಲಿ ದೊಡ್ಡವು ಎಂದರು.
ಮಾಧ್ಯಮಗಳ ಮುಂದೆ ಮಾತನಾಡಬೇಕಾದರೆ ಶಾಸಕರು ತಾವು ಬಳಸುವ ಭಾಷೆಯ ಬಗ್ಗೆ ಅರಿವು ಇಟ್ಟುಕೊಳ್ಳಬೇಕು. ನಾನು ಈ ಸದನದ ಸ್ಪೀಕರ್. ಈ ಸ್ಥಾನ ಬಹಳ ದೊಡ್ಡದು ಹಾಗೂ ಪವಿತ್ರವಾದದ್ದು. ಈ ಸ್ಥಾನದಲ್ಲಿ ಕೂರಲು ನಾನು ಬಹಳ ಚಿಕ್ಕ ವ್ಯಕ್ತಿ. ನಾನು ಇಲ್ಲಿರುವಾಗ ಈ ಸ್ಥಾನಕ್ಕೆ ಅಪಮಾನ ಆಗಬಾರದು ಅನ್ನೋದು ನನ್ನ ಕಾಳಜಿ ಎಂದು ರಮೇಶ್ ಕುಮಾರ್ ಹೇಳಿದರು.
ನಾನು ತಲೆ ಬಾಗೋದು ಸಂವಿಧಾನದ ಆಶಯಗಳಿಗೆ ಮಾತ್ರ. ಇದು ಸದನದ ವಿಚಾರ. ನಾವು ದನಗಳ ರೀತಿ ವರ್ತಿಸಲು ಸಾಧ್ಯವಿಲ್ಲ. ಏನೇ ತೀರ್ಮಾನಗಳು ಆಗಬೇಕಾದರೂ, ನೀತಿ, ನಿಯಮಗಳ ಅಡಿಯಲ್ಲೇ ಆಗಬೇಕು ಎಂದು ಅವರು ಹೇಳಿದರು.
ಎರಡು ರಾಜೀನಾಮೆ ಪತ್ರಗಳು ನನ್ನ ಬಳಿ ಬಂದಿಲ್ಲ. ಆನಂದ್ ಸಿಂಗ್ ರಾಜೀನಾಮೆ ಮಾತ್ರ ನನಗೆ ತಲುಪಿದೆ. ನಿನ್ನೆ ದೊಮ್ಮಲೂರಿನಲ್ಲಿರುವ ನನ್ನ ಮನೆಗೆ ಬೆಳಗ್ಗೆ 6.30ಕ್ಕೆ ಬಂದು ರಾಜೀನಾಮೆ ಕೊಟ್ಟಿದ್ದಾರೆ. ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಅವರಿಗೆ ಹೇಳಿದ್ದೇನೆ ಎಂದು ರಮೇಶ್ ಕುಮಾರ್ ತಿಳಿಸಿದರು.
ಇಷ್ಟೇ ದಿನದಲ್ಲಿ ರಾಜೀನಾಮೆ ಬಗ್ಗೆ ತೀರ್ಮಾನ ಮಾಡಬೇಕೆಂಬ ನಿಯಮವೇನು ಇಲ್ಲ. ಸಂವಿಧಾನದ ಅಡಿಯಲ್ಲಿ ಕಾನೂನು ಬದ್ಧವಾಗಿ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇನೆ. ನನ್ನ ಭೇಟಿಗೆ ಯಾವ ಶಾಸಕರು ಸಮಯ ಕೇಳಿಲ್ಲ. ಒಂದು ವೇಳೆ ಯಾರಾದರೂ ರಾಜೀನಾಮೆ ನೀಡಬೇಕೆಂದು ನನ್ನ ಭೇಟಿಗೆ ಅವಕಾಶ ಕೇಳಿದರೆ ಅವರಿಗೆ ನನ್ನ ನಂಬರ್ ಕೊಡಿ ಎಂದು ರಮೇಶ್ ಕುಮಾರ್ ಹೇಳಿದರು.
ಆನಂದ್ ಸಿಂಗ್ ಹೊರತುಪಡಿಸಿ ಬೇರೆ ಯಾವ ಶಾಸಕರು ನನಗೆ ರಾಜೀನಾಮೆ ಪತ್ರವನ್ನು ಕೊಟ್ಟಿಲ್ಲ. ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನಡೆಸಿದ ಪ್ರಕ್ರಿಯೆ ಮಾದರಿಯಲ್ಲೆ ಈ ಪ್ರಕ್ರಿಯೆಯನ್ನು ನಡೆಸುತ್ತೇನೆ.
-ರಮೇಶ್‌ಕುಮಾರ್, ಸ್ಪೀಕರ್