ವಿವಾದಾತ್ಮಕ ಹೇಳಿಕೆ ಆರೋಪ: ಮುತಾಲಿಕ್ ವಿರುದ್ಧದ ಪ್ರಕರಣ ರದ್ದು

Update: 2019-07-02 16:21 GMT

ಬೆಂಗಳೂರು, ಜು.2: ಅತ್ಯಾಚಾರಿಗಳ ಕೈ ಕತ್ತರಿಸಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. ಈ ಕುರಿತು ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಎಂ.ಅರುಣ್ ಶ್ಯಾಮ್ ಅವರು, ಪ್ರಮೋದ್ ಮುತಾಲಿಕ್ ವಿರುದ್ಧ ರಾಜಕೀಯ ಉದ್ದೇಶದಿಂದ ದೂರು ದಾಖಲಿಸಿದ್ದಾರೆ. ಆದರೆ, ದೂರು ದಾಖಲಿಸುವಾಗ ನ್ಯಾಯಾಲಯದ ಅನುಮತಿಯನ್ನೆ ಪಡೆದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ವಕೀಲ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರ ಮುತಾಲಿಕ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿತು.

ಪ್ರಕರಣವೇನು: 2014ರ ನ.16ರಂದು ಮಂಗಳೂರಿಗೆ ಬಂದಿದ್ದ ಪ್ರಮೋದ್ ಮುತಾಲಿಕ್, ಆರ್ಯ ಸಮಾಜದ ಬಳಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅತ್ಯಾಚಾರಿಗಳನ್ನು ಕೋರ್ಟ್ ಮತ್ತು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವ ಬದಲು ಪಾಲಕರು ಅಥವಾ ಸಂಬಂಧಪಟ್ಟವರು ಅತ್ಯಾಚಾರಿಗಳ ಕೈ ಕಾಲುಗಳನ್ನು ಕತ್ತರಿಸಬೇಕು. ಇಂತಹ ಪ್ರಕರಣಗಳು ನಡೆದ ಸಂದರ್ಭ ಶ್ರೀರಾಮ ಸೇನೆಯ ವತಿಯಿಂದ ಕೋರ್ಟ್ ಪ್ರಕ್ರಿಯೆಯ ಸಂಪೂರ್ಣ ವೆಚ್ಚ ಭರಿಸಲಾಗುವುದು ಎಂದಿದ್ದರು.

ಈ ಹೇಳಿಕೆಯ ಹಿಂದೆ ಹಿಂಸೆಗೆ ದಾರಿ ಮಾಡಿಕೊಡುವ ಮತ್ತು ಶಾಂತಿ ಕದಡುವ ಉದ್ದೇಶ ಇರುವುದರಿಂದ ಮಂಗಳೂರು ಪೂರ್ವ ವಿಭಾಗ ಪೊಲೀಸ್ ಠಾಣೆಯವರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 505(1)ಬಿಯಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಮುತಾಲಿಕ್, ಮಂಗಳೂರಿನ ಕೋರ್ಟ್‌ನಲ್ಲಿ 2014ರ ಡಿ.20ರಂದು ಜಾಮೀನು ಪಡೆದಿದ್ದರು. ಹಾಗೂ ಮಂಗಳೂರು ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಹಾಗೂ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News