ಬಿಜೆಪಿಯ ಕುತಂತ್ರವನ್ನು ಎದುರಿಸುವ ಶಕ್ತಿ ನಮ್ಮ ನಾಯಕರಿಗಿದೆ: ಸಚಿವ ಕೃಷ್ಣಭೈರೇಗೌಡ

Update: 2019-07-02 16:24 GMT

ಬೆಂಗಳೂರು, ಜು.2: ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು 20 ಬಾರಿ ಗಡುವು ಕೊಟ್ಟಿದ್ದಾರೆ. ಈ ಸರಕಾರ ಉರುಳಿಸಲು ಕೇಂದ್ರ, ರಾಜ್ಯ ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಅವರ ಕುತಂತ್ರವನ್ನು ಎದುರಿಸುವ ಶಕ್ತಿ ನಮ್ಮ ನಾಯಕರಿಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಖರೀದಿಸುವ ಆಪರೇಷನ್ ಕಮಲವನ್ನು ಹೇಳಿ ಕೊಟ್ಟವರೇ ಬಿಜೆಪಿಯವರು. ಅವರು ಏನೇ ಕುತಂತ್ರ ಮಾಡಿದರೂ ನಾವು ಅದನ್ನು ತಡೆಯುತ್ತೇವೆ ಎಂದರು.

ನಾನು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಸ್ಪೀಕರ್ ಕಚೇರಿಗೆ ಬಂದಿದ್ದೆ. ಎತ್ತಿನಹೊಳೆ ಯೋಜನೆ, ಜಲಧಾರೆ ಸೇರಿದಂತೆ ಹಲವು ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಶಾಸಕರ ರಾಜೀನಾಮೆ ವಿಚಾರವು ಸಾಂದರ್ಭಿಕವಾಗಿ ಚರ್ಚೆಯಾಗಿದೆ ಅಷ್ಟೇ. ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಸ್ಪೀಕರ್ ಏನು ಹೇಳಿಲ್ಲ. ಆದರೆ, ಆನಂದ್ ಸಿಂಗ್ ತನಗೆ ರಾಜೀನಾಮೆ ಕೊಟ್ಟ ಬಳಿಕ, ರಾಜ್ಯಪಾಲರಿಗೂ ಹೋಗಿ ಕೊಟ್ಟಿರುವುದೇಕೆ ಎಂದು ಸ್ಪೀಕರ್ ಆಶ್ಚರ್ಯ ವ್ಯಕ್ತಪಡಿಸಿದರು ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರದ ಪ್ರಕ್ರಿಯೆಯನ್ನೆ ಇಲ್ಲೂ ಮಾಡುವ ಸಾಧ್ಯತೆಯಿದೆ. ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಕ್ಕೂ ಅವಕಾಶ ಕೊಡಬಹುದು. ಸಂವಿಧಾನದ 10ನೇ ಶೆಡ್ಯೂಲ್ಡ್‌ನ ಉಲ್ಲೇಖದಂತೆ ಕೆಲಸ ಮಾಡುವುದಾಗಿ ಸ್ಪೀಕರ್ ಹೇಳಿದ್ದಾರೆ ಎಂದು ಅವರು ಹೇಳಿದರು.

ಆನಂದ್‌ಸಿಂಗ್ ಅವರನ್ನು ಕರೆದು ಮಾತನಾಡುತ್ತೇನೆ. ರಾಜೀನಾಮೆಗೆ ಕಾರಣವೇನು, ಯಾವುದಾದರೂ ಒತ್ತಡಕ್ಕೆ ಮಣಿದಿದ್ದಾರಾ ಅಂತೆಲ್ಲ ಅವರನ್ನು ಕೇಳಬೇಕಿದೆ ಎಂದು ಸ್ಪೀಕರ್ ಹೇಳಿದರು ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಅತೃಪ್ತರ ಮನವೊಲಿಸಲು ಸಚಿವ ಸಂಪುಟ ಪುನರ್ ರಚನೆ ಆಗುತ್ತೆ ಅನ್ನೋ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೃಷ್ಣಭೈರೇಗೌಡ, ಇದೆಲ್ಲ ಊಹಾಪೋಹ. ಸದ್ಯದ ಪರಿಸ್ಥಿತಿಯಲ್ಲಿ ಇದೆಲ್ಲ ಸಾಧ್ಯವಿಲ್ಲ. ಸಂಪುಟ ಪುನರಚನೆ ಈ ಹಂತದಲ್ಲಿ ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News