ಮಗಳ ಮದುವೆ ಸಾಲ ತೀರಿಸಲೆಂದು ತೆಗೆದ 3 ಲಕ್ಷ ರೂ. ಕಳ್ಳರ ಪಾಲು

Update: 2019-07-02 16:47 GMT

ಮಡಿಕೇರಿ, ಜು.2: ಮಗಳ ಮದುವೆಗೆಂದು ಮಾಡಿದ ಸಾಲವನ್ನು ತೀರಿಸಲೆಂದು ಬ್ಯಾಂಕಿನಿಂದ ಹಣ ಪಡೆದು ಮನೆಗೆ ಹಿಂದಿರುಗುವ ವೇಳೆ ಸಮಯ ಸಾಧಿಸಿದ ಚೋರರು ವ್ಯಕ್ತಿಯೊಬ್ಬರ ಬಳಿಯಿದ್ದ 3 ಲಕ್ಷ ರೂ. ದೋಚಿದ ಘಟನೆ ಕುಶಾಲನಗರದಲ್ಲಿ ಮಂಗಳವಾರ ನಡೆದಿದೆ.

ಮುತ್ತಿನ ಮುಳ್ಳುಸೋಗೆಯ ಶಿವಕುಮಾರ್ ಎಂಬುವವರು ತಮ್ಮ ಮಗಳ ಮದುವೆಯ ಸಾಲದ ಹಣವನ್ನು ಹಿಂದಿರುಗಿಸಲು ಕುಶಾಲನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಿಂದ ಹಣ ತೆಗೆದಿದ್ದರು. ಮನೆಗೆ ಹಿಂತಿರುಗುವ ವೇಳೆ ಬೈಕ್ ಟೈರ್ ಪಂಕ್ಚರ್ ಆಗಿರುವುದನ್ನು ಗಮನಿಸಿ ಅದನ್ನು ಸರಿಪಡಿಸಲು ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ವೆಂಕಟೇಶ್ವರ ಟೈರ್ ವರ್ಕ್ ಶಾಪ್‍ಗೆ ತೆರಳಿದ್ದರು. ಶಿವಕುಮಾರ್ ಅವರು ಬೈಕ್‍ನಲ್ಲಿದ್ದ ಹೆಲ್ಮೆಟನ್ನು ತೆಗೆದುಕೊಂಡು ಟೈರ್ ಶಾಪ್‍ಗೆ ತೆರಳುತ್ತಿದ್ದಂತೆ, ದುಷ್ಕರ್ಮಿಗಳು ಬೈಕ್‍ನಲ್ಲಿದ್ದ ಹಣದ ಬ್ಯಾಗ್‍ನ್ನು ಅಪಹರಿಸಿ ಪರಾರಿಯಾಗಿದ್ದಾರೆ.

ತನ್ನ ಮಗಳ ಮದುವೆಯ ಸಾಲವನ್ನು ತೀರಿಸಲು ಬ್ಯಾಂಕಿನಿಂದ ಹಣ ತೆಗೆದುಕೊಂಡು ಮನೆಗೆ ಹಿಂತಿರುಗುವ ವೇಳೆ, ಕಳ್ಳರು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಶಿವಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಚೋರರು ಶಿವಕುಮಾರ್ ಅವರನ್ನು ಬ್ಯಾಂಕಿನಿಂದಲೇ ಹಿಂಬಾಲಿಸಿಕೊಂಡು ಬಂದಿರುವ ಶಂಕೆ ಇದ್ದು, ನಾಲ್ಕೈದು ಮಂದಿಯ ತಂಡ ಹೊಂಚು ಹಾಕಿ ಹಣ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.

ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಚೋರರ ತಂಡಕ್ಕೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News