×
Ad

ರಾತ್ರೋರಾತ್ರಿ ಬೋರ್‍ವೆಲ್ ಕೊರೆದ ಗುತ್ತಿಗೆದಾರರು: ಸಾರ್ವಜನಿಕರಿಂದ ಅಧಿಕಾರಿಗಳಿಗೆ ತರಾಟೆ

Update: 2019-07-02 22:49 IST

ಮೂಡಿಗೆರೆ, ಜು.2: ಕೆರೆ ಕಾಮಗಾರಿ ಸಂಬಂಧ ದೂರು ನೀಡಿದವರೇ ಲಂಚ ಕೇಳಿರುವುದು, ಸ್ಥಳೀಯ ಗ್ರಾಪಂ ಸದಸ್ಯರ ಗಮನಕ್ಕೆ ತಾರದೇ ರಾತ್ರೋರಾತ್ರಿ ಬೋರ್‍ವೆಲ್ ಕೊರೆದ ಬಗ್ಗೆ ಸದಸ್ಯರಿಂದ ದೂರು, ಸರಕಾರಿ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸದಿದ್ದಲ್ಲಿ ಶಾಲೆಗೆ ಬಿಗ ಜಡಿಯುವುದಾಗಿ ಗ್ರಾಮಸ್ಥರಿಂದ ಎಚ್ಚರಿಕೆ.

ಇದು ಮಂಗಳವಾರ ತಾಲೂಕಿನ ಕಿರುಗುಂದ ಗ್ರಾಪಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮಸಭೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳು. ಮಂಗಳವಾರ ಕಿರುಗುಂದ ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಪಂ ಅಧ್ಯಕ್ಷೆ ಭಾಗ್ಯಾ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ಸಭೆಯ ಆರಂಭದಲ್ಲಿ ಗ್ರಾಮಸ್ಥರಾದ ಯು.ಜಿ.ಅಣ್ಣೇಗೌಡ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತ್‍ಗೆ ಐದು ಲಕ್ಷ ರೂ. ಮಂಜೂರಾಗಿದೆ. ಈ ಅನುದಾನ ಬಳಸಿಕೊಂಡು ಜನರಿಂದ ಕೆಲಸ ಮಾಡಿಸಬೇಕಿತ್ತು. ಆದರೆ ಯಂತ್ರಗಳಿಂದ ಕಾಮಗಾರಿಯನ್ನು ಮಾಡಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಕಿರುಗುಂದ ಲೋಕೇಶ್ ಹಾಗೂ ಚೆನ್ನಕೇಶವ ಎಂಬವರು ಪ್ರತಿಕ್ರಿಯಿಸಿ, ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ. ಇದನ್ನು ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಮಗಾರಿ ಮಾಡಿದವರ ಬಳಿ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದೀರಿ. ಅದನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಗ್ರಾಮಸಭೆಯಲ್ಲಿ ದೂರು ಹೇಳುತ್ತಿದ್ದೀರಿ. ನಿಮ್ಮ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತರಾಟೆಗೆ ತೆಗೆದರು.

ಗ್ರಾಪಂ ವ್ಯಾಪ್ತಿಯ ಹೆಗ್ಗರವಳ್ಳಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 30 ಮಕ್ಕಳಿಗೆ ಓರ್ವ ಶಿಕ್ಷಕ ಪಾಠ ಮಾಡುತ್ತಿದ್ದಾರೆ. ಇನ್ನೋರ್ವ ಶಿಕ್ಷಕ ರಜೆ ಮೇಲೆ ತೆರಳಿದ್ದು ಇದುವರೆಗೂ ಬಂದಿಲ್ಲ. ಶಾಲೆಗೆ ಹೆಚ್ಚುವರಿ ಶಿಕ್ಷಕನನ್ನು ನೇಮಿಸುವಂತೆ ಬಿಇಒ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಕೂಡಲೇ ಶಿಕ್ಷಕನನ್ನು ನೇಮಿಸಬೇಕು. ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ತಪ್ಪಿದಲ್ಲಿ ಶಾಲಾ ಮಕ್ಕಳೊಂದಿಗೆ ಶಾಲೆಗೆ ಬೀಗ ಜಡಿದು ಧರಣಿ ಮಾಡಲಾಗುವುದು ಎಂದು ಗ್ರಾಮದ ಮುಖಂಡ ಕಿರುಗುಂದ ಕೆ.ಕೆ.ರಾಮಯ್ಯ ಸಭೆಯಲ್ಲಿದ್ದ ಸಿಆರ್‍ಪಿಯನ್ನು ಎಚ್ಚರಿಸಿದರು. ಇದಕ್ಕೆ ಶಿಕ್ಷಣಾಧಿಕಾರಿಯಿಂದ ಕ್ರಮವಹಿಸುವ ಭರವಸೆ ಸಿಕ್ಕಿತು.

ಬೆಟ್ಟದಮನೆ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ರಾತ್ರೋರಾತ್ರಿ ಬೋರ್‍ವೆಲ್ ಕೊರೆಯಲಾಗಿದೆ. ಈ ಸಂಬಂಧ ಗ್ರಾಪಂ ಸದಸ್ಯರ ಗಮನಕ್ಕೆ ತಂದಿಲ್ಲ. ಕೊಳವೆ ಬಾವಿಯನ್ನು ರಾತ್ರಿ ಕೊರೆಯುವ ಆವಶ್ಯಕತೆ ಏನಿತ್ತು ಎಂದು ಯು.ಎಚ್.ಹೇಮಶೇಖರ್ ಇಲಾಖೆಯ ಇಂಜಿನಿಯರ್ ರನ್ನು ತರಾಟೆಗೆ ಪಡೆದರು. ಇದೇ ವೇಳೆ ಅವರು ಗ್ರಾಮದಲ್ಲಿ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಇದರಿಂದ ಬಡವರು ತೊಂದರೆಗೊಳಗಾಗಿದ್ದಾರೆ. ತಾಲೂಕು ಆಡಳಿತ ಕೂಡಲೇ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದು ಕಂದಾಯಾಧಿಕಾರಿಗಳನ್ನು ಆಗ್ರಹಿಸಿದರು. ನಂತರ ಮಾತನಾಡಿದ ಕೆ.ಕೆ.ರಾಮಯ್ಯ, ಕೃಷಿ, ತೋಗಾರಿಕೆ ಇಲಾಖೆಗಳ ಸೌಲಭ್ಯಗಳು ರಾಜಕಾರಣಿಗಳು ಶಿಫಾರಸು ಮಾಡಿದವರಿಗೆ ಮಾತ್ರ ಸಿಗುತ್ತಿದೆ. ಇದರಿಂದಾಗಿ ನೈಜ ಫಲಾನುಭವಿಗಳು, ಬಡವರಿಗೆ ಸೌಲಭ್ಯ ಸಿಗುತ್ತಿಲ್ಲ. ಇಂತಹ ತಾರತಮ್ಯವನ್ನು ಅಧಿಕಾರಿಗಳು ತಡೆಯಬೇಕೆಂದು ಒತ್ತಾಯಿಸಿದರು. 

ಸಭೆಯಲ್ಲಿ ಮರಳಿನ ಸಮಸ್ಯೆಯ ಬಗ್ಗೆ ಗ್ರಾಮಸ್ಥರು, ಗ್ರಾಪಂ ಸದಸ್ಯರು ವ್ಯಾಪಕವಾಗಿ ದೂರು ಹೇಳಿದರು. ಈ ಸಂಬಂಧ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಲು ತೀರ್ಮಾನಿಸಲಾಯಿತು.

ಸಭೆಯ ಅಂತ್ಯದಲ್ಲಿ ಜಿಪಂ ಸದಸ್ಯೆ ಅನಿತಾ ಮುತ್ತಪ್ಪ ಮಾತನಾಡಿ, ತನ್ನ ಅವಧಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳನ್ನು ತರಲಾಗಿದೆ. ಉಳಿದ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ತಾಪಮ ಉಪಾಧ್ಯಕ್ಷೆ ಸವಿತಾ ರಮೇಶ್, ನೋಡಲ್ ಅಧಿಕಾರಿ ಡಾ.ಮನು, ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ್, ಮೆಸ್ಕಾಂ ಅಧಿಕಾರಿ ರವಿಕುಮಾರ್, ಎಎಸ್ಸೈ ಗೋಪಾಲಗೌಡ, ಪಿಡಿಒ ಸಾಹಿತ್ಯಾ, ಕಾರ್ಯದರ್ಶಿ ಪ್ರಶಾಂತ್ ಮತ್ತು ಗ್ರಾಪಂ ಸದಸ್ಯರು ಹಾಗೂ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News