×
Ad

ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

Update: 2019-07-02 22:51 IST

ಮಡಿಕೇರಿ, ಜು.2 : ಶಂಕಿತ ನಕ್ಸಲ್ ಮುಖಂಡ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ನಕ್ಸಲ್ ಪ್ರಕರಣಗಳನ್ನು ಎದುರಿಸುತ್ತಿರುವ ರೂಪೇಶ್‍ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 

ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ರೂಪೇಶ್‍ನನ್ನು ಸೋಮವಾರ ಸಂಜೆ ಕರೆತಂದು ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂಡೊಗಳು ಶಸ್ತ್ರಸಜ್ಜಿತರಾಗಿ ಬಿಗಿ ಭದ್ರತೆಯಲ್ಲಿ ಇಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಬಾರಿ ಜಿಂದಾಬಾದ್, ಮಾವೋವಾದಿಗಳು ಅಪರಾಧಿಗಳಲ್ಲ ಎಂದು ಘೋಷಣೆ ಕೂಗಿದ ರೂಪೇಶ್, ನಗುನಗುತ್ತಾ ನ್ಯಾಯಾಲಯ ಆವರಣ ಪ್ರವೇಶಿಸಿದ. 

ಬಳಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ.ಮಲ್ಲಾಪುರ ಅವರ ಎದುರು ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಹಾಜರುಪಡಿಸಲಾಯಿತು. ತನ್ನ ಪ್ರಕರಣದ ಪರವಾಗಿ ತಾನೇ ವಾದಿಸುವುದಾಗಿ ಈ ಹಿಂದೆಯೇ ರೂಪೇಶ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಆರೋಪಿ ರೂಪೇಶ್‍ಗೆ ವಾದ ಮಂಡಿಸಲು ನ್ಯಾಯಮೂರ್ತಿಗಳು ಅವಕಾಶ ನೀಡಿದರು ಎಂದು ಹೇಳಲಾಗಿದೆ. 

ವಾದವನ್ನು ಆಲಿಸಿದ ನಂತರ ನ್ಯಾಯಾಧೀಶರು, ಸರಕಾರಿ ವಕೀಲರಿಗೂ ಪ್ರತಿವಾದ ಮಂಡಿಸಲು ಜುಲೈ 23ಕ್ಕೆ ದಿನಾಂಕ ನಿಗಧಿ ಮಾಡಿ, ಮುಂದಿನ ವಿಚಾರಣೆಯನ್ನು 21 ದಿನಗಳ ಕಾಲ ಮುಂದೂಡಿದರು. 

ಕೇಂದ್ರ ಗುಪ್ತ ದಳ, ರಾಜ್ಯ ಗುಪ್ತ ದಳ, ರಾಜ್ಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಫ್ತಿಯಲ್ಲಿ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದರು. 

ನ್ಯಾಯಾಲಯದ ಮುಖ್ಯ ದ್ವಾರದಿಂದ ಹೊರ ಬಂದ ರೂಪೇಶ್ ಮತ್ತೆ ನಕ್ಸಲ್ ಪರ ಘೋಷಣೆ ಮೊಳಗಿಸಿ ಪೊಲೀಸ್ ವಾಹನವೇರಿದ. ಪೊಲೀಸ್ ಸರ್ಪಗಾವಲಿನಲ್ಲಿ ರೂಪೇಶ್‍ನನ್ನು ಕೇರಳದ ವೈವೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News