ನಾಲೆಗೆ ನೀರು ಬಿಡುಗಡೆಗೆ ಒತ್ತಾಯಿಸಿ ಹೆದ್ದಾರಿ ತಡೆ
ಮಂಡ್ಯ, ಜು.2: ಕಳೆದ ವಾರ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಎಂಟು ದಿನ ಅಹೋರಾತ್ರಿ ಧರಣಿ ನಡೆಸಿ ಕೆಆರ್‍ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಿದ್ದ ರೈತಸಂಘದ ಕಾರ್ಯಕರ್ತರು, ರಸ್ತೆ ತಡೆ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಮಂಗಳವಾರ ಗೆಜ್ಜಲಗೆರೆ ಬಳಿ ಮೈಸೂರು ಬೆಂಗಳೂರು ಹೆದ್ದಾರಿ ಬಂದ್ ಹಾಗೂ ಶಿವಳ್ಳಿ ಸಮೀಪ ರಸ್ತೆತಡೆ ನಡೆಸಿ ಕೆಆರ್‍ಎಸ್ ಹಾಗೂ ಹೇಮಾವತಿ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸುವಂತೆ ಸರಕಾರ, ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮದ್ದೂರು ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಗೆಜ್ಜಲಗೆರೆ ಬಳಿ ಹೆದ್ದಾರಿ ತಡೆದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಮಾರ್ಗದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ರೈತ ಸಂಘದ ತಾಲೂಕು ಅಧ್ಯಕ್ಷ ಜಿ.ಎ.ಶಂಕರ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಸೋತ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ನಾಲೆಗಳಿಗೆ ನೀರು ಹರಿಸದೆ ದ್ವೇಷದ ರಾಜಕಾರಣ ಮಾಡುತ್ತಾ ರೈತ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಳೆಯಿಲ್ಲದೆ ಬೆಳೆದು ನಿಂತ ಕಬ್ಬು, ಹಿಪ್ಪುನೇರಳೆ, ಬಾಳೆ, ತರಕಾರಿ ಮತ್ತಿತರ ಬೆಳೆಗಳು ಒಣಗಿ ಹೋಗುತ್ತಿವೆ. ಜಲಾಶಯದಲ್ಲಿ ಕುಡಿಯಲು ಉಳಿದು ಬೆಳೆಗಳಿಗೆ ಒಂದು ಕಟ್ಟು ನೀರು ಹರಿಸಬಹುದು. ಕೂಡಲೇ ನೀರು ಹರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಕೀಳಘಟ್ಟ ನಂಜುಂಡಯ್ಯ, ಅಣ್ಣೂರು ಮಹೇಂದ್ರ, ಲಿಂಗಪ್ಪಾಜಿ, ಗೊಲ್ಲರದೊಡ್ಡಿ ಅಶೋಕ್, ಸಿದ್ದೇಗೌಡ, ವರದಪ್ಪ, ವೆಂಕಟೇಶ್, ರಾಮಣ್ಣ, ಪುಟ್ಟರಾಜು, ಸ್ವಾಮಿ, ವೆಂಕಟಪ್ಪ, ಸತೀಶ್, ಶ್ರೀನಿವಾಸ, ಕುಮಾರ್, ಎಂ.ಸಿ.ಕೃಷ್ಣ, ರಾಮಣ್ಣ, ಚಂದ್ರಣ್ಣ, ರಮೇಶ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಂಡ್ಯ ತಾಲೂಕು ಶಿವಳ್ಳಿಯಲ್ಲಿ ನಡೆದ ರಸ್ತೆತಡೆ ವೇಳೆ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಕೂಡಲೇ ನಾಲೆಗೆ ನೀರು ಬಿಡುಗಡೆ ಮಾಡಬೇಕು. ಇಲ್ಲವಾದರೆ ನೀರು ಬಿಡುಗಡೆವರೆಗೂ ರಸ್ತೆ ಬಂದ್ ಚಳವಳಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.