ತೆಲಂಗಾಣ ಮಾದರಿಯ ಮರಳು ನೀತಿಗೆ ಪ್ರಸ್ತಾವನೆ: ಸಚಿವ ರಾಜಶೇಖರ ಪಾಟೀಲ್
ದಾವಣಗೆರೆ, ಜು.2: ತೆಲಂಗಾಣ ರಾಜ್ಯದಲ್ಲಿ ಮರಳು ನೀತಿ ಉತ್ತಮವಾಗಿದ್ದು, ಇಂತಹ ಮರಳು ನೀತಿಯನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರುವ ಕುರಿತು ಜು.3 ರಂದು ನಡೆಯುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಬಿ. ಪಾಟೀಲ್ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮರಳು ನೀತಿ ಕುರಿತು ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಗೆ ತೆರಳಿ ಅಧ್ಯಯನ ಮಾಡಲಾಗಿದ್ದು, ತೆಲಂಗಾಣ ಮರಳು ನೀತಿ ಉತ್ತಮವಾಗಿದೆ. ರಾಜ್ಯದಲ್ಲಿ ಮರಳು ನೀತಿ ಕುರಿತು ಬಹುತೇಕ ಜಿಲ್ಲೆಗಳಲ್ಲಿ ವಿವಿಧ ರೀತಿಯ ಸಮಸ್ಯೆಗಳಿದ್ದು, ಇದಕ್ಕೆ ಸೂಕ್ತವಾಗಿ ಕಂಡು ಬರುತ್ತಿರುವ ತೆಲಂಗಾಣ ಮರಳು ನೀತಿ ಮಾದರಿಯನ್ನು ಅಳವಡಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ರಾಮಪ್ಪ ಇವರು, ಜಿಲ್ಲೆಯಲ್ಲಿ ದೇವಸ್ಥಾನ ಮತ್ತು ವೈಯಕ್ತಿಕ ಆಶ್ರಯ ಮನೆಗಳನ್ನು ಕಟ್ಟಲು ಎಸ್‍ಆರ್ ದರದ ಬದಲಾಗಿ ರಾಯಲ್ಟಿ ದರ ಮೆಟ್ರಿಕ್ ಟನ್ ಒಂದಕ್ಕೆ ರೂ.60 ರಂತೆ ಮರಳನ್ನು ನೀಡಬೇಕೆಂದು ಒತ್ತಾಯಿಸಿದರು. ಸಚಿವರು ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ, ಸಿಇಓ ಮತ್ತು ಎಸ್‍ಪಿ ಇವರೊಂದಿಗೆ ಚರ್ಚಿಸಿದಂತೆ ಜಿಲ್ಲೆಯಲ್ಲಿ ಮರಳಿನ ಅಭಾವವಿಲ್ಲ. ಒಂದು ಮೆಟ್ರಿಕ್ ಟನ್‍ಗೆ ಎಸ್‍ಆರ್ ದರ ರೂ. 998 ರಂತೆ ಮರಳನ್ನು ಒದಗಿಸಲಾಗುತ್ತಿದೆ. ನಿಯಮಾನುಸಾರ ಮರಳು ಬ್ಲಾಕ್ ಗುತ್ತಿಗೆದಾರರು ಎಸ್‍ಆರ್ ದರದಲ್ಲಿ ಸರ್ಕಾರಿ ಕೆಲಸಕ್ಕೆ ಶೇ. 25 ರಷ್ಟು ಹಾಗೂ ಶೇ.75 ನ್ನು ಸಾರ್ವಜನಿಕರಿಗೆ ನೀಡಬೇಕು ಎಂದರು.
ಎಸ್ಪಿ ಆರ್.ಚೇತನ್ ಮಾತನಾಡಿ, ಈ ಬಗ್ಗೆ ಸಾಮಾನ್ಯ ಜನತೆಗೆ ಮಾಹಿತಿ ಕೊರತೆಯಿಂದ ಮರಳು ಖರೀದಿಸಲು ಮುಂದೆ ಬರುತ್ತಿಲ್ಲವೆಂದರು. ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿರುವ ಮರುಳು ಬ್ಲಾಕ್‍ಗಳು ಹಾಗೂ ಇಲ್ಲಿ ಲಭ್ಯವಿರುವ ಮರಳಿನ ಬಗ್ಗೆ ಜನರಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ತಿಳಿಸಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಜಿಲ್ಲೆಯಲ್ಲಿ ಮರಳು ಇದೆ. ಆದರೆ ಕಡಿಮೆ ದರದಲ್ಲಿ ಜನರಿಗೆ ದೊರಕುತ್ತಿಲ್ಲ. ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ ಅಥವಾ ಪಿಡಬ್ಲ್ಯುಡಿ ಯಾವುದೇ ಏಜೆನ್ಸಿಯನ್ನು ನಿಗದಿಪಡಿಸಿ, ಆದರೆ ಮರಳು ಬೇಕು. ಬಡವರು ಮನೆ ಕಟ್ಟಲು ಎತ್ತಿನ ಗಾಡಿಯಲ್ಲಿ ಸಾಗಿಸುವಾಗ ಜಪ್ತಿ ಮಾಡಿ ಜೈಲಿಗೆ ಕಳುಹಿಸಲಾಗುತ್ತಿದೆ. ಜನ ಅಧಿಕಾರಿಗಳನ್ನಲ್ಲ, ಬದಲಾಗಿ ನಮ್ಮನ್ನು ಕೇಳುತ್ತಾರೆ ಎಂದರು. ಹರಿಹರ ಶಾಸಕ ರಾಮಪ್ಪ ಮಾತನಾಡಿ, ಬೈಕ್ ಮತ್ತು ಆಟೋದಲ್ಲಿ ಮರಳನ್ನು ತಂದರೂ ಜಪ್ತಿ ಮಾಡಿ ದಂಡ ವಿಧಿಸಲಾಗಿದೆ ಎಂದು ದೂರಿದರು.
ಎಸ್‍ಪಿ ಚೇತನ್ ಪ್ರತಿಕ್ರಿಯಿಸಿ, ಎತ್ತಿನಗಾಡಿಯಲ್ಲಿ ಮನೆ ಕಟ್ಟುವ ಉದ್ದೇಶಕ್ಕೆ ಒಂದು ಅಥವಾ ಎರಡು ಗಾಡಿಯಷ್ಟು ಮರಳನ್ನು ತೆಗೆದಕೊಂಡು ಹೋದಲ್ಲಿ ಯಾವುದೇ ರೀತಿ ವಿಚಾರಣೆ ಮಾಡಿಲ್ಲ. ಬದಲಾಗಿ ವ್ಯಾಪಾರದ ಉದ್ದೇಶದಿಂದ ತೆಗೆದುಕೊಂಡು ಹೋದವರ ಗಾಡಿಗಳನ್ನು ಜಪ್ತಿ ಮಾಡಲಾಗಿದೆ. ಇದಕ್ಕೆ ಶಾಸಕರು, ಇಷ್ಟು ಬಿಗಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಎಸ್‍ಪಿ ಯವರು ಕಾನೂನಿನ ಪ್ರಕಾರ ನಡೆದುಕೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು. .
ಸರ್ಕಾರದ ಗುತ್ತಿಗೆ ಕೆಲಸಗಳಿಗೆ ಮರಳನ್ನು ಎಸ್‍ಆರ್ ದರದಲ್ಲಿ ನೀಡಿ, ಆದರೆ ವೈಯಕ್ತಿಕ ಆಶ್ರಯ ಮತ್ತು ದೇವಸ್ಥಾನಗಳಿಗೆ ರಾಯಲ್ಟಿ ದರದಲ್ಲಿ ನೀಡಬೇಕೆಂದು ಶಾಸಕರು ಒತ್ತಾಯಿಸಿದಾಗ, ಸಚಿವರು ಪ್ರತಿಕ್ರಿಯಿಸಿ, ಈ ನಿಟ್ಟಿನಲ್ಲಿ ಚಿಂತಿಸಬೇಕಾದರೆ ರಾಜ್ಯದ್ಯಂತ ಮರಳು ನೀತಿ ತಿದ್ದುಪಡಿ ಮಾಡಬೇಕಾಗುತ್ತದೆ. ಎತ್ತಿನ ಬಂಡಿಯಲ್ಲಿ ವ್ಯಾಪಾರದ ಉದ್ದೇಶದಿಂದ ಮರಳನ್ನು ತರುವುದು ಕಾನೂನು ಬಾಹಿರವಾಗುತ್ತದೆ. ರಾಜ್ಯದ 13 ಜಿಲ್ಲೆಗಳಲ್ಲಿ ಮರಳು ಇಲ್ಲ. ಬೇರೆ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ತರಿಸಿಕೊಳ್ಳುವ ಸ್ಥಿತಿಯಿದೆ. ಇದನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಂಡು ನಾಳೆ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಇವರ ಅಧ್ಯಕ್ಷತೆಯಲ್ಲಿ ನಡೆವ ಸಚಿವ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ಎಸ್‍ಪಿ ಯವರು ನದಿ, ಹಳ್ಳ ಕೆರೆ ಇರುವ ಸುಮಾರು 15 ಕಿ ಮೀ ಒಳಗೆ ವಿನಾಯಿತಿ ನೀಡುವ ಕುರಿತು ಸಲಹೆ ನೀಡಿದರು. ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕುಮಾರ್ ಮಾತನಾಡಿ, ಕಮರ್ಷಿಯಲ್ ಮತ್ತು ನಾನ್‍ಕಮರ್ಷಿಯಲ್ ಪಾಯಿಂಟ್‍ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಉಪ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಬಹುದು.
ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಎಂ-ಸ್ಯಾಂಡ್‍ನ್ನು ಸುಮಾರು 14 ರಿಂದ 15 ಟನ್‍ಗಟ್ಟಲೆ ಸಾಗಿಸಲಾಗುತ್ತಿದೆ. ಆದರೆ ಮರಳನ್ನು ಮೂರು ಟನ್‍ಗಿಂತ ಹೆಚ್ಚು ಸಾಗಿಸಲು ಬಿಡುತ್ತಿಲ್ಲ. ಎಂ-ಸ್ಯಾಂಡ್‍ಗೆ ಯಾವುದೇ ಮಿತಿ ಇಲ್ಲ, ಆದರೆ ಮರಳಿಗೆ ಮಾತ್ರ ಅತಿಯಾದ ಮಿತಿ ಹಾಕಲಾಗುತ್ತಿದ್ದು, ಈ ತಾರತಮ್ಯ ನೀತಿಯೇಕೆ ಎಂದು ಪ್ರಶ್ನಿಸಿದರು. ಭೂ ವಿಜ್ಞಾನಿಗಳು ಪ್ರತಿಕ್ರಿಯಿಸಿ, ಮೂರುವರೆಯಿಂದ ನಾಲ್ಕು ಟನ್‍ಗಳಷ್ಟು ಮರಳನ್ನು ಸಾಗಿಸಲು ಅವಕಾಶವಿದೆ. ಓವರ್ ಲೋಡ್ ಆದರೆ ಆರ್‍ಟಿಓ ರವರು ಕ್ರಮ ವಹಿಸುತ್ತಿದ್ದಾರೆ ಎಂದಾಗ, ಶಾಸಕರು ಮತ್ತು ಸಚಿವರು ಆರ್‍ಟಿಓ ರವರು ಸ್ವಲ್ಪ ನೋಡಿ ಕ್ರಮ ವಹಿಸಬೇಕೆಂದು ಸೂಚಿಸಿದರು.
ಭೂವಿಜ್ಞಾನಿ ಪ್ರದೀಪ್ ಸಭೆಯಲ್ಲಿ ಮಾತನಾಡಿ, 2018-19 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಖ್ಯ ಖನಿಜ ಶೇ.60.90, ಉಪ ಖನಿಜ ಶೇ.88.27 ಸೇರಿದಂತೆ ಒಟ್ಟು ಶೇ.87.43 ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 146 ಎಕರೆ 27 ಗುಂಟೆಯಲ್ಲಿ ಒಟ್ಟು 70 ಕಲ್ಲು ಗಣಿಗುತ್ತಿಗೆ ನೀಡಿದ್ದು, 32.23 ಹೆಕ್ಟೇರ್ ಪ್ರದೇಶದಲ್ಲಿ 01 ಮ್ಯಾಂಗನೀಸ್ ಗಣಿ ಗುತ್ತಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 93.06 ಎಕರೆ ವಿಸ್ತೀರ್ಣದಲ್ಲಿ ಒಟ್ಟು 45 ಕಲ್ಲುಪುಡಿ ಮಾಡುವ ಕ್ರಷರ್ ಗಳಿದ್ದು, 43 ಘಟಕಗಳಿಗೆ ಚಾಲನೆಗೊಳಿಸುವ ಫಾರಂ-ಸಿ(ಪರವಾನಿಗೆ) ನೀಡಲಾಗಿದೆ. ನಿಯಮ 7 ರ ಅಡಿಯಲ್ಲಿ ಸರ್ಕಾರಿ ಕಾಮಗಾರಿಗಳಿಗೆ 2 ಕ್ರಷರ್ ಗಳಿಗೆ ಅನುಮತಿ ನೀಡಲಾಗಿದೆ. ಹೊಸದಾಗಿ ಕ್ರಷರ್ ಘಟಕ ಸ್ಥಾಪಿಸಲು 22 ಘಟಕಗಳಿಗೆ ಫಾರಂ ಬಿ1 ವಿತರಿಸಲಾಗಿದ್ದು, ಇನ್ನೂ ಪ್ರಾರಂಭವಾಗಿರುಲ್ಲ ಎಂದರು.
ಜಿಲ್ಲೆಯಲ್ಲಿ 10.01 ಎಕರೆಯಲ್ಲಿ ಒಟ್ಟು 02 ಎಂ-ಸ್ಯಾಂಡ್ ಘಟಕಗಳಿಗೆ ಅನುಮತಿ ನೀಡಲಾಗಿದೆ. 222.20 ಎಕರೆ ವಿಸ್ತೀರ್ಣದಲ್ಲಿ ಒಟ್ಟು 15 ಚಾಲ್ತಿಯಲ್ಲಿರುವ ಮರಳು ಗುತ್ತಿಗೆಗಳಿದ್ದು, 6 ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಡಿಎಂಎಫ್ ಅಡಿಯಲ್ಲಿ 2019 ರ ಜೂನ್ ಅಂತ್ಯಕ್ಕೆ 623.94 ಲಕ್ಷ ಹಣ ಸಂಗ್ರಹವಾಗಿದೆ. 2017-18 ನೇ ಸಾಲಿಗೆ ರೂ.275.94 ಲಕ್ಷ ಕ್ರಿಯಾ ಯೋಜನೆ ಮೊತ್ತ ಅನುಮೋದನೆಗೊಂಡಿದೆ. 6 ಕಾಮಗಾರಿಗಳನ್ನು ಕೈಗೊಂಡಿದ್ದು, ರೂ.275.94 ಲಕ್ಷ ವೆಚ್ಚಗೊಂಡಿರುತ್ತದೆ. 2018-19 ನೇ ಸಾಲಿಗೆ ರೂ.269.55 ಲಕ್ಷ ಮೊತ್ತಕ್ಕೆ ಕ್ರಿಯಾಯೋಜನೆ ಸಿದ್ದಪಡಿಸಬೇಕಾಗಿದೆ ಎಂದರು.
ಸಭೆಯಲ್ಲಿ ಜಿ.ಪಂ. ಸಿಇಓ ಹೆಚ್.ಬಸವರಾಜೇಂದ್ರ, ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ, ಭೂವಿಜ್ಞಾನಿಗಳಾದ ಪ್ರದೀಪ್, ವಿನಯಾ ಭಟ್, ಚೈತ್ರ, ಕವಿತ, ಸಾರಿಗೆ ಅಧಿಕಾರಿ ಎನ್.ಜೆ.ಬಣಕಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.