ರಿಸರ್ವ್ ಬ್ಯಾಂಕ್ ಸ್ವಾಯತ್ತೆಗೆ ಎಳ್ಳುನೀರು

Update: 2019-07-03 06:17 GMT

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳಿಗೆ ಅಪಾಯ ಎದುರಾಯಿತು. 2019ರಲ್ಲಿ ಎರಡನೇ ಬಾರಿ ಅದೇ ಪಕ್ಷ ಅದೇ ನಾಯಕನ ನೇತೃತ್ವದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಈ ಗಂಡಾಂತರ ಮತ್ತಷ್ಟು ತೀವ್ರವಾಗಿದೆ. ಈ ಬಾರಿ ಭಾರತದ ರಿಸರ್ವ್ ಬ್ಯಾಂಕ್ ಮೇಲೆ ಈ ಸರಕಾರ ಸಂಪೂರ್ಣ ಹಿಡಿತ ಸಾಧಿಸಿದೆ. ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ತಮ್ಮ ಮೂರು ವರ್ಷಗಳ ಸೇವಾವಧಿ ಪೂರ್ಣಗೊಳ್ಳುವ ಮೊದಲೇ ಪದತ್ಯಾಗ ಮಾಡಿರುವುದು ಸಾಮಾನ್ಯ ಸಂಗತಿಯಲ್ಲ. ಅಮೆರಿಕದಲ್ಲಿ ತಮ್ಮ ಬೋಧನಾ ವೃತ್ತಿಯನ್ನು ಮುಂದುವರಿಸಲು ಆಚಾರ್ಯ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇದೊಂದೇ ಕಾರಣವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ನಡುವೆ ಕೆಲ ತಿಂಗಳಿಂದ ನಡೆದಿರುವ ಮುಸುಕಿನ ಗುದ್ದಾಟವನ್ನು ಗಮನಿಸಿದರೆ, ಆಚಾರ್ಯ ಅವರ ರಾಜೀನಾಮೆಗೆ ಇದೊಂದೇ ಕಾರಣವಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಿಸರ್ವ್ ಬ್ಯಾಂಕಿನ ಸ್ವಾಯತ್ತೆಯಲ್ಲಿ ಕೇಂದ್ರದ ಮೋದಿ ಸರಕಾರ ಮಾಡುತ್ತಿರುವ ಹಸ್ತಕ್ಷೇಪವನ್ನು ಪ್ರತಿಭಟಿಸಿ ಕಳೆದ ವರ್ಷ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದರು. ಆಗ ವಿರಲ್ ಆಚಾರ್ಯ ಊರ್ಜಿತ್ ಪಟೇಲರನ್ನು ಬೆಂಬಲಿಸಿದ್ದರು. ಈಗ ಅದೇ ಆಚಾರ್ಯರು ಪದತ್ಯಾಗ ಮಾಡಿರುವುದರಿಂದ ರಿಸರ್ವ್ ಬ್ಯಾಂಕ್‌ನ ಸ್ವಾಯತ್ತೆಯ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ರಿಸರ್ವ್ ಬ್ಯಾಂಕ್‌ನಲ್ಲಿ 9 ಲಕ್ಷ ಕೋಟಿ ರೂಪಾಯಿ ಮೀಸಲು ನಿಧಿ ಇದೆ. ಇದನ್ನು ತನ್ನ ಬೊಕ್ಕಸಕ್ಕೆ ವರ್ಗಾಯಿಸಬೇಕೆಂದು ಮೋದಿ ಸರಕಾರ ನಿರಂತರವಾಗಿ ಒತ್ತಡ ಹೇರುತ್ತಿದೆ.ಇದನ್ನು ವಿರಲ್ ಆಚಾರ್ಯ ಒಪ್ಪಲಿಲ್ಲ. ಆಚಾರ್ಯ ಅವರ ನಿಲುವು ತಾತ್ವಿಕವಾಗಿ ಸಮರ್ಥನೀಯವಾಗಿದೆ. ಈ ದೇಶವನ್ನಾಳಿದ ಹಿಂದಿನ ಯಾವ ಸರಕಾರಗಳೂ ರಿಸರ್ವ್ ಬ್ಯಾಂಕಿನ ಸ್ವಾಯತ್ತೆಗೆ ಧಕ್ಕೆ ತಂದಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ವಿರಲ್ ಆಚಾರ್ಯ ಕೊನೆಗೆ ಹತಾಶರಾಗಿ ರಾಜೀನಾಮೆಯ ಮೊರೆ ಹೋಗಿದ್ದಾರೆ.
ರಿಸರ್ವ್ ಬ್ಯಾಂಕ್ ಮೀಸಲು ನಿಧಿಯ ಪ್ರಮಾಣದ ಬಗ್ಗೆ ನಿರ್ಧರಿಸಲು ರಚಿಸಲಾಗಿರುವ ಬಿಮಲ್ ಜಲಾನಾ ಸಮಿತಿಯು ಈ ಬಗ್ಗೆ ಸದ್ಯದಲ್ಲೇ ತನ್ನ ವರದಿಯನ್ನು ನೀಡಲಿದೆ. ಈ ನಡುವೆ ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ ಆರ್ಥಿಕ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ಪರಿಣಿತರು ವಿವಿಧ ಸಂಸ್ಥೆಗಳನ್ನು ತೊರೆದು ಹೋಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.

ಹಣಕಾಸು ಹಾಗೂ ಬ್ಯಾಂಕಿಂಗ್ ವಲಯದ ಉನ್ನತ ನಿಯಂತ್ರಣ ಸಂಸ್ಥೆಯಾಗಿರುವ ರಿಸರ್ವ್ ಬ್ಯಾಂಕಿನ ಸ್ವಾಯತ್ತೆಯ ಮೇಲೆ ಕೇಂದ್ರ ಸರಕಾರ ನಡೆಸಿದ ದಾಳಿಯನ್ನು ವಿರಲ್ ಆಚಾರ್ಯ ಮಾತ್ರವಲ್ಲ, ದೇಶದ ಪ್ರಮುಖ ಆರ್ಥಿಕ ತಜ್ಞರು ವಿರೋಧಿಸಿದ್ದಾರೆ. ಕೇಂದ್ರ ಸರಕಾರ ಈ ಪ್ರತಿರೋಧಕ್ಕೆ ಮಣಿದಿಲ್ಲ. ರಿಸರ್ವ್ ಬ್ಯಾಂಕ್‌ನ ಸ್ವಾಯತ್ತೆಯ ಪರವಾಗಿ ವಿರಲ್ ಆಚಾರ್ಯ ಗಟ್ಟಿ ಧ್ವನಿಯಾಗಿದ್ದರು. ಆರ್ಥಿಕ ಅಭಿವೃದ್ಧಿ ದರ, ಹಣದುಬ್ಬರ, ವಸೂಲಾಗದ ಸಾಲ, ವರಮಾನ ವೃದ್ಧಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕಿನ ಸ್ವತಂತ್ರ ನಿಲುಮೆಯನ್ನು ವಿರಲ್ ಆಚಾರ್ಯ ಎತ್ತಿ ಹಿಡಿದಿದ್ದರು.

ರಿಸರ್ವ್ ಬ್ಯಾಂಕ್ ಜೊತೆ ಮೋದಿ ಸರಕಾರ ಹಲವಾರು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಂಘರ್ಷಕ್ಕೆ ಇಳಿದಿತ್ತು. ರಿಸರ್ವ್ ಬ್ಯಾಂಕ್‌ನ ಮೀಸಲು ನಿಧಿಯ ವರ್ಗಾವಣೆ ಮಾತ್ರವಲ್ಲದೆ, ಕಿರು ಮತ್ತು ಸಣ್ಣ ಉದ್ದಿಮೆಗಳಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು ಹೆಚ್ಚಿಸುವುದು, ಸರಕಾರದ ಒಡೆತನದ ಹನ್ನೊಂದು ಬ್ಯಾಂಕುಗಳಿಗೆ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸುವುದು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಬಂಡವಾಳ ನೆರವು ನೀಡುವ ಪ್ರಸ್ತಾವನೆ ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಸೂತ್ರದ ಗೊಂಬೆಯಾಗಲು ನಿರಾಕರಿಸಿದ ಆಚಾರ್ಯರಿಗೆ ಪದತ್ಯಾಗ ಮಾಡುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ.

ಊರ್ಜಿತ್ ಪಟೇಲ್, ವಿರಲ್ ಆಚಾರ್ಯ ಅವರ ರಾಜೀನಾಮೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ, ಸ್ವತಂತ್ರ ಮನೋಭಾವದ ಹಣಕಾಸು ಪರಿಣಿತರು ಮೋದಿ ಸರಕಾರದ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ಅಂತಹವರು ತಾವಾಗಿ ಹೊರಗೆ ಹೋಗುವಂತಹ ಅಸಹನೀಯ ವಾತಾವರಣವನ್ನು ಈ ಸರಕಾರ ನಿರ್ಮಿಸುತ್ತಿದೆ. ಹಿಂದಿನ ಆರ್‌ಬಿಐ ಗವರ್ನರ್‌ಗಳಾದ ರಘುರಾಮ್ ರಾಜನ್, ಊರ್ಜಿತ್ ಪಟೇಲ್‌ರಂತೆ ಈ ಉನ್ನತ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೂರನೆಯ ವ್ಯಕ್ತಿ ವಿರಲ್ ಆಚಾರ್ಯ ಅವರಾಗಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಿಂತ ಸಂಸ್ಥೆಗಳು ಮುಖ್ಯ. ಭಾರತದ ರಿಸರ್ವ್ ಬ್ಯಾಂಕ್ ಒಂದು ಸ್ವಾಯತ್ತ ಸಂಸ್ಥೆ. ಅದರ ಸ್ವಾಯತ್ತೆೆಗೆ ಯಾವುದೇ ರೀತಿಯಿಂದಲೂ ಧಕ್ಕೆ ಬರಬಾರದು. ಹೀಗೆ ಧಕ್ಕೆ ಬಂದಾಗ ಸಂಸ್ಥೆಯ ಘನತೆ ಎತ್ತಿ ಹಿಡಿಯಲು ರಘುರಾಮ ರಾಜನ್, ಊರ್ಜಿತ್ ಪಟೇಲ್, ವಿರಲ್ ಆಚಾರ್ಯ ಅಂತಹವರು ತಮ್ಮ ಮನಸ್ಸಾಕ್ಷಿಗೆ ತಲೆ ಬಾಗಿ ರಾಜೀನಾಮೆ ಕೊಡುವುದು ಅನಿವಾರ್ಯವಾಗುತ್ತದೆ. ಕೇಂದ್ರ ಸರಕಾರ ಇನ್ನು ಮುಂದಾದರೂ ಹೀಗಾಗದಂತೆ ನೋಡಿಕೊಳ್ಳಬೇಕು.
ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಭಾರತದ ಅಮೂಲ್ಯ, ಹೆಮ್ಮೆಯ ಸಾಂವಿಧಾನಿಕ ಸಂಸ್ಥೆಗಳು ತೀವ್ರ ರೀತಿಯಲ್ಲಿ ದಾಳಿಗೊಳಗಾಗಿವೆ. ತನ್ನ ಕೋಮುವಾದಿ ಫ್ಯಾಶಿಸ್ಟ್ ಸಿದ್ಧಾಂತವನ್ನು ಜಾರಿಗೊಳಿಸುವ ಗುರಿ ಸಾಧನೆಗಾಗಿ ಈ ದಾಳಿ ನಡೆದಿದೆ. ಇಂತಹ ದಾಳಿಗೊಳಗಾದ ಸಂಸ್ಥೆಗಳಲ್ಲಿ ರಿಸರ್ವ್ ಬ್ಯಾಂಕ್ ಕೂಡಾ ಒಂದು.

ರಿಸರ್ವ್ ಬ್ಯಾಂಕಿನ 83 ವರ್ಷಗಳ ಇತಿಹಾಸದಲ್ಲಿ ಅದರ ಸ್ವಾಯತ್ತೆಯನ್ನು ಅಪಹರಿಸುವ ಯತ್ನ ನಡೆದಿದೆ. ನೋಟು ಅಮಾನ್ಯೀಕರಣ ಮಾಡುವಾಗಲೂ ರಿಸರ್ವ್ ಬ್ಯಾಂಕಿನ ಹಿಂದಿನ ಗವರ್ನರ್ ರಘುರಾಮ್ ರಾಜನ್‌ರ ಸಲಹೆಯನ್ನು ತಿರಸ್ಕರಿಸಲಾಯಿತು.

ಒಟ್ಟಾರೆ ಭಾರತದ ಪ್ರಜಾಪ್ರಭುತ್ವ ಗಂಭೀರ ಸ್ವರೂಪದ ಅಪಾಯವನ್ನು ಎದುರಿಸುತ್ತಿದೆ. ಎರಡನೇ ಬಾರಿ ಮೋದಿಯವರು ಗೆದ್ದು ಬಂದ ನಂತರ ಈ ಅಪಾಯದ ತೀವ್ರತೆ ಹೆಚ್ಚಾಗಿದೆ. ಈ ದೇಶದ ಸಾಂವಿಧಾನಿಕ ಸಂಸ್ಥೆಗಳು ಹಾಗೂ ಪ್ರಜಾಪ್ರಭುತ್ವವನ್ನು ಕಾಪಾಡಲು ಜನತಂತ್ರಾತ್ಮಕ ಮಾರ್ಗದಲ್ಲಿ ತೀವ್ರ ಪ್ರತಿರೋಧವನ್ನು ಒಡ್ಡಬೇಕಾಗಿದೆ. ಇದೊಂದೇ ಈಗ ಉಳಿದಿರುವ ದಾರಿ.
ದೇಶದಲ್ಲಿ ಪ್ರಜಾಪ್ರಭುತ್ವ ಅವನತಿಗೊಂಡರೆ ಮತ್ತೆ ಕತ್ತಲ ಯುಗ ಬರುತ್ತದೆ ಅದನ್ನು ತಡೆಯಲು ಜನ ಮುಂದಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News