ಮೈತ್ರಿ ಸರಕಾರದ ಸ್ಥಿರತೆ ಕಾಪಾಡುವಲ್ಲಿ ಸಿದ್ದು-ಎಚ್‌ಡಿಕೆ ವಿಫಲ: ಎಚ್.ವಿಶ್ವನಾಥ್

Update: 2019-07-03 14:16 GMT

ಹೊಸದಿಲ್ಲಿ, ಜು.3: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸ್ಥಿರತೆಯನ್ನು ಕಾಪಾಡುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಫಲವಾಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದು ಒಂದು ವರ್ಷವಾಗಿದೆ. ಈ ಮೈತ್ರಿ ಸರಕಾರದಲ್ಲಿ ಹಲವರು ಅಸಮಾಧಾನಗೊಂಡಿದ್ದಾರೆ. ಆದರೆ, ಯಾವ ಮುಖಂಡರೂ ಅತೃಪ್ತ ಶಾಸಕರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.

ಉಭಯ ಪಕ್ಷಗಳ ನಾಯಕರು ಈ ವಿಚಾರದಲ್ಲಿ ತಮಗೆ ಜವಾಬ್ದಾರಿಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಈ ಸರಕಾರದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಉಭಯ ಪಕ್ಷಗಳ ನಾಯಕರು ನಿಷ್ಕ್ರಿಯರಾಗಿದ್ದಾರೆ. ಇದರಿಂದಾಗಿ, ನಾವು ರಾಷ್ಟ್ರಮಟ್ಟದಲ್ಲಿ ನಗೆಪಾಟಲಿಗೀಡಾಗಿದ್ದೇವೆ. ಸರಕಾರ ಹಾಗೂ ನಾಯಕರ ಈ ನಿರ್ಲಕ್ಷತನ ರಾಜ್ಯ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸಂಸದರಿಂದ ಆಹ್ವಾನ: ಹೊಸದಿಲ್ಲಿಗೆ ಬರುವಂತೆ ಬಿಜೆಪಿ ಸಂಸದರೇ ನನ್ನನ್ನು ಆಹ್ವಾನಿಸಿದರು. ಅವರೆಲ್ಲ ನನ್ನ ಹಳೆಯ ಸ್ನೇಹಿತರು. ಆದರೆ, ಯಾರೂ ಕೂಡ ನನ್ನನ್ನು ಬಿಜೆಪಿಗೆ ಬರುವಂತೆ ಆಹ್ವಾನ ನೀಡಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನಾನು ಬಿಜೆಪಿಗೆ ಸೇರ್ಪಡೆಯಾಗುತ್ತೇನೋ, ಇಲ್ಲವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು, ರಾಜ್ಯದ ಅಭಿವೃದ್ಧಿ ವಿಚಾರ ಮಾತ್ರ ಚರ್ಚೆ ಆಗುತ್ತಿಲ್ಲ. ನಾನು ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೆ, ನಾನು ಅವರ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದರ್ಥವಲ್ಲ. ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವುದಾದರೆ ಎಲ್ಲರಿಗೂ ತಿಳಿಸಿಯೇ ಹೋಗುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.

ಜೆಡಿಎಸ್ ಅಧ್ಯಕ್ಷರಾಗಿ ವಿಶ್ವನಾಥ್ ಮುಂದುವರಿಕೆ: ಹೊಸದಿಲ್ಲಿಯಲ್ಲಿ ವಿಶ್ವನಾಥ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ವಿಶ್ವನಾಥ್ ಜೆಡಿಎಸ್ ಪಕ್ಷ ಬಿಡುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಾಗಿ ಅವರು ಮುಂದುವರೆಯುತ್ತಾರೆ ಎಂದರು.

ಅವರ ಭೇಟಿ ವೇಳೆ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನಮಗೆ ವಿಶ್ವನಾಥ್ ಅವರ ಮಾರ್ಗದರ್ಶನ ಬೇಕಿದೆ. ಕಾಫಿ ಬೆಳೆಗಾರರ ಬಗ್ಗೆ ಚರ್ಚಿಸಲು ಅವರು ಹೊಸದಿಲ್ಲಿಗೆ ಬಂದಿದ್ದರು. ಮುಂದಿನ ದಿನಗಳಲ್ಲಿ ನಾನು ಅವರ ಮಾರ್ಗದರ್ಶನದಲ್ಲೇ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News