ರಮೇಶ್ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

Update: 2019-07-03 14:17 GMT

ಬೆಂಗಳೂರು, ಜು.3: ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡ ಇಲ್ಲವೆಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಿಸಿದ್ದಾರೆ.

ನಗರದ ಅರಣ್ಯಭವನದಲ್ಲಿ ಆಯೋಜಿಸಿದ್ದ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕಾರಣಗಳಿಗಾಗಿ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಲ್ಲಿ ಬಿಜೆಪಿಯ ಪಾತ್ರವಿಲ್ಲವೆಂದು ಸ್ಪಷ್ಟ ಪಡಿಸಿದರು.

ರಮೇಶ್ ಜಾರಕಿಹೊಳಿಯನ್ನು ಬಿಜೆಪಿ ಬರುವಂತೆ ಬಾಲಚಂದ್ರ ಜಾರಕಿಹೊಳಿ ಆಹ್ವಾನಿಸಿದ್ದಾರೆ. ಅವರು ಬಿಜೆಪಿಯಲ್ಲಿರುವುದರಿಂದ ಹೀಗೆ ಅಹ್ವಾನಿಸಿರುವುದು ಸಹಜ. ಅದರಲ್ಲಿ ತಪ್ಪೇನು ಇಲ್ಲ. ಆದರೆ, ನಾನು ಹಾಗೂ ರಮೇಶ್ ಜಾರಕೊಹೊಳಿ ನಡುವೆ ಕಳೆದ ಆರು ತಿಂಗಳಿಂದ ಯಾವುದೆ ಸಂಪರ್ಕವಿಲ್ಲ. ನಮ್ಮ ರಾಜಕೀಯ, ವ್ಯವಹಾರ ಬೇರೆ ಬೇರೆನೇ ಎಂದು ಅವರು ಹೇಳಿದರು.

ರಮೇಶ್ ಜಾರಕಿಹೊಳಿಯ ಬೇಡಿಕೆ ಏನೆಂಬುದು ಈಗಲೂ ನನಗೆ ಎಂಟನೆ ಅದ್ಬುತ ಎನಿಸಿದೆ. ಆದರೆ, ಅವರ ರಾಜೀನಾಮೆ ಹಿಂದೆ ಅವರ ಮೂವರು ಅಳಿಯಂದಿರ ಕೈವಾಡ ಇರುವುದು ಸ್ಪಷ್ಟವಾಗಿದೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಖಚಿತವಾದರೆ ಗೋಕಾಕ್ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿಯನ್ನು ಅಭ್ಯರ್ಥಿಯಾಗಿ ಮಾಡುವ ಇಚ್ಛೆ ಇದೆ. ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು.

-ಸತೀಶ್ ಜಾರಕಿಹೊಳಿ, ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News