×
Ad

ನೀರಿಗಾಗಿ ಮುಂದುವರೆದ ರೈತರ ರಸ್ತೆ ತಡೆ ಚಳವಳಿ

Update: 2019-07-03 19:57 IST

ಮಂಡ್ಯ, ಜು.3: ಒಣಗುತ್ತಿರುವ ಬೆಳೆಗಳಿಗೆ ಕೆಆರ್‍ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಲು ಒತ್ತಾಯಿಸಿ ರಸ್ತೆತಡೆ ಚಳವಳಿ ಆರಂಭಿಸಿರುವ ರೈತಸಂಘದ ಕಾರ್ಯಕರ್ತರು ಎರಡನೇ ದಿನವಾದ ಬುಧವಾರವೂ ಚಳವಳಿ ಮುಂದುವರಿಸಿದರು.

ಮಂಗಳವಾರ ಶಿವಳ್ಳಿ, ಗೆಜ್ಜಲಗೆರೆ ಬಳಿ ಹೆದ್ದಾರಿ ತಡೆ ನಡೆಸಿದ್ದ ರೈತರು, ಬುಧವಾರ ನಗರದ ಹೊರವಲಯದ ವಿ.ಸಿ.ಫಾರಂ ಗೇಟ್ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿದರು.

ಒಣಗುತ್ತಿರುವ ಕಬ್ಬು ಹಿಡಿದು ಅರೆಬೆತ್ತಲೆ ಮೆರವಣಿಗೆ ನಡೆಸಿದ ಅವರು, ಜಿಲ್ಲಾಡಳಿತ, ರಾಜ್ಯ ಸರಕಾರ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹೋರಾಟದಿಂದಾಗಿ ಹೆದ್ದಾರಿ ಮಾರ್ಗದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಪ್ರಯಾಣಿಕರು ಪರದಾಡುವಂತಾಯಿತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಚಳವಳಿಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಜಲಾಶಯದಲ್ಲಿ ಬೆಳೆಗಳಿಗೆ ಒಂದು ಕಟ್ಟು ನೀರು ಬಿಡುವಷ್ಟು ನೀರಿದ್ದರೂ ಸರಕಾರ ರೈತರ ಕೂಗಿಗೆ ಕಿವಿಗೊಡುತ್ತಿಲ್ಲ. ಪ್ರತಿಭಟನೆ ಮೂಲಕ ಸಮಸ್ಯೆ ತೋಡಿಕೊಂಡರೂ ಮುಖ್ಯಮಂತ್ರಿ ಗಮನಹರಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಇರುವ ಬೆಳೆಗಳು ಒಣಗಿ ಹೋದರೆ ರೈತರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ. ಮುಖ್ಯಮಂತ್ರಿಗಳು ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ನಾಲೆಗಳಿಗೆ ನೀರು ಹರಿಸಿ ರೈತರನ್ನು ಉಳಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಕೀಲಾರ ಸೋಮಶೇಖರ್, ಲತಾ ಶಂಕರ್, ಇಂಡುವಾಳು ಸಿದ್ದೇಗೌಡ, ಬಸವರಾಜು, ಹರೀಶ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News