×
Ad

ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ

Update: 2019-07-03 20:03 IST

ಕೋಲಾರ,ಜು.3: ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ. ಬ್ಯಾಂಕ್ ಇರುವುದೇ ಬಡವರಿಗಾಗಿ. ನೇರವಾಗಿ ಬ್ಯಾಂಕಿಗೆ ಬಂದು ಸಾಲ ಪಡೆಯಿರಿ. ದಲ್ಲಾಳಿಗಳೊಂದಿಗೆ ಬಂದರೆ ಅಂತಹವರಿಗೆ ಸಾಲ ಸೌಲಭ್ಯ ನೀಡುವುದಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.

ಬುಧವಾರ ನಗರದ ಡಿಸಿಸಿ ಬ್ಯಾಂಕಿನ ಆವರಣದಲ್ಲಿ 10 ಮಹಿಳಾ ಸಂಘಗಳಿಗೆ ಸುಮಾರು 56 ಲಕ್ಷ ರೂ. ಬಡ್ಡಿ ರಹಿತ ಸಾಲದ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.

ಸಾಲ ಕೊಡಿಸಲು ದಲ್ಲಾಳಿಗಳು ಡಿಸಿಸಿ ಬ್ಯಾಂಕಿನ ಸುತ್ತ ಓಡಾಡುತ್ತಿದ್ದು, ಅವರನ್ನು ಯಾರೂ ನಂಬಬಾರದು ಎಂದು ಕಿವಿಮಾತು ಹೇಳಿದ ಅವರು, 
ಬಡವರು ಬ್ಯಾಂಕಿಗೆ ಮೋಸ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಬ್ಯಾಂಕ್ ಇರುವುದೇ ಬಡವರಿಗಾಗಿ. ನೇರವಾಗಿ ಬಂದು ಅರ್ಜಿ ಹಾಕಿ ಸಾಲ ಸಿಗುತ್ತದೆ ಎಂದರು.

ಬಡವರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ತನಕ ಸಾಲ ನೀಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಅದೇ ಯೋಜನೆಯನ್ನು ಈಗನ ಸಮ್ಮಿಶ್ರ ಸರ್ಕಾರವೂ ಮುಂದುವರೆಸಿದೆ. ಯಾರೋ ರಸ್ತೆಯಲ್ಲಿ ಹೇಳಿದ ಗಾಳಿ ಮಾತುಗಳನ್ನು ನಂಬಿ ಸಾಲ ಮರುಪಾವತಿ ಮಾಡದೆ ಇರಬಾರದು ಎಂದರು.

ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದವರಿಗೆ ಶೂನ್ಯ ಬಡ್ಡಿಯ ಸೌಲಭ್ಯವೂ ಸಿಗುತ್ತದೆ. ಮರು ಸಾಲ ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಆರ್ಥಿಕವಾಗಿ ಶಕ್ತಿ ಕಳೆದುಕೊಂಡಿದ್ದ ಡಿಸಿಸಿ ಬ್ಯಾಂಕ್ ಇಂದು ಉತ್ತಮವಾಗಿದೆ. ಎರಡೂ ಜಿಲ್ಲೆಗಳ ಬಡವರು, ರೈತರು, ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಶಕ್ತಿಯುತವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಸಾಲವನ್ನು ಮಹಿಳಾ ಸಂಘಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ನಮ್ಮ ಜನ ಸಾಲಕ್ಕಾಗಿ ಡಿಸಿಸಿ ಬ್ಯಾಂಕಿಗೆ ಬರುತ್ತಾರೆ. ವಹಿವಾಟು ನಡೆಸಲು ವಾಣಿಜ್ಯ ಬ್ಯಾಂಕ್‍ಗಳಿಗೆ ಹೋಗುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು. ನಿಮಗೆ ಸಾಲ ಕೊಟ್ಟು ಹೆಚ್ಚು ಬಡ್ಡಿ ಕೇಳುವವರನ್ನೇ ಹೆಚ್ಚಾಗಿ ನಂಬುತ್ತೀರ. ಆದರೆ ಬ್ಯಾಂಕ್‍ನಿಂದ ನೀಡುವ ಸಾಲಕ್ಕೆ ಸರ್ಕಾರವೇ ಬಡ್ಡಿ ಪಾವತಿ ಮಾಡುತ್ತದೆ. ನೀವು ಕೇವಲ ಪಡೆದುಕೊಂಡಿರುವ ಸಾಲ ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು. ಈ ಮೂಲಕ ಮತ್ತಿತರರಿಗೆ ಸೌಕರ್ಯ ಕಲ್ಪಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಅರಹಳ್ಳಿ ಸೋಸೈಟಿ ನಿರ್ದೇಶಕ ಬಾಬು ಮೌನಿ ಮಾತನಾಡಿ, ಇತ್ತೀಚಿಗೆ ಖಾಸಗಿ ವ್ಯಕ್ತಿಗಳು ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ ಗ್ರಾಮಾಭಿವೃದ್ಧಿ ಬ್ಯಾಂಕ್‍ಗಳನ್ನು ರಚನೆ ಮಾಡಿಕೊಂಡು ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡಿ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು. ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡುತ್ತಿರುವ ಬ್ಯಾಂಕ್‍ಗಳನ್ನು ನಿಯಂತ್ರಣ ಮಾಡಬೇಕಿದೆ. ಅವರು ಬಡವರಿಗೆ ಸಹಾಯ ಮಾಡಲು ಬ್ಯಾಂಕ್ ಸ್ಥಾಪನೆ ಮಾಡಿಕೊಂಡಿಲ್ಲ. ಅವರ ಲಾಭಕ್ಕಾಗಿ ಇವರಿಂದ ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್‍ ವತಿಯಿಂದ 2 ಹಾಗೂ ಅರಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ 8 ಸ್ತ್ರೀ ಶಕ್ತಿ ಸಂಘಗಳಿಗೆ ಒಟ್ಟು 56 ಲಕ್ಷ ರೂ. ಸಾಲ ವಿತರಿಸಲಾಯಿತು.

ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‍ಕುಮಾರ್, ಸೊಣ್ಣೇಗೌಡ, ನಾಗನಾಳ ಸೋಮಣ್ಣ, ಗೋವಿಂದರಾಜು, ನಗರಸಭೆ ಮಾಜಿ ಸದಸ್ಯ ರೌತ್‍ಶಂಕರಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಇ.ಗೋಪಾಲಪ್ಪ, ಲಿಂಗೇಗೌಡ ಸೇರಿ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News