"ಚಿಕ್ಕಮಗಳೂರು ಜಿಲ್ಲೆಯಲ್ಲಿ 12 ಅನಧಿಕೃತ ಶಾಲೆಗಳು"
ಚಿಕ್ಕಮಗಳೂರು, ಜು.3: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬಾರದು. ದಾಖಲಿಸಿದಲ್ಲಿ ಆಗುವ ತೊಂದರೆಗಳಿಗೆ ಪೋಷಕರೇ ನೇರ ಹೊಣೆಯಾಗುತ್ತಾರೆಯೇ ಹೊರತು ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಂಜಯ್ಯ ಜಿಲ್ಲಾ ಶಿಕ್ಷಣ ಇಲಾಖೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 12 ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವಾಗ ಸದರಿ ಶಾಲೆಯು ಇಲಾಖೆಯ ಅನುಮತಿ ಪಡೆದಿದೆಯೆ ಎಂಬುದನ್ನು ಖಚಿತಪಡಿಸಿಕೊಂಡು ತಮ್ಮ ಮಕ್ಕಳನ್ನು ದಾಖಲಾತಿ ಮಾಡಬೇಕು ಎಂದು ತಿಳಿಸಿರುವ ಅವರು, 2019-20ನೇ ಸಾಲಿಗೆ ಶಾಶ್ವತ ಅನುದಾನ ರಹಿತವಾಗಿ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಆನ್‍ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಜಿಲ್ಲಾ ತ್ರಿ ಸದಸ್ಯ ಸಮಿತಿಯವರ ಶಿಫಾರಸಿನಂತೆ ಕ್ರಮ ವಹಿಸಲಾಗಿತ್ತು. ಅಲ್ಲದೇ ಈ ಪೂರ್ವದಲ್ಲಿ ಅರ್ಜಿ ಸಲ್ಲಿಸಿದ ಸಂಸ್ಥೆಗಳು ಇಲಾಖಾ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆಯ ಮೇರೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ತರಗತಿಗಳನ್ನು ನಡೆಸಿರುವುದು ನಿಯಮ ಬಾಹಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ನಡೆಸುವ ಖಾಸಗಿ ಶಾಲೆಗಳಾದ ಬೀರೂರಿನ ಶ್ರೀ ಮಾರುತಿ ವಿದ್ಯಾ ಸಂಸ್ಥೆ(ರಿ)ಯ ಮಾರುತಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಮಗಳೂರಿನ ವಾಸವಿ ಏಜುಕೇಷನ್ ಸೊಸೈಟಿಯ ನರ್ಚರ್ ಇಂಟರ್ ನ್ಯಾಷನಲ್ ಪ್ರೌಢಶಾಲೆ, ಆರ್.ಎಸ್.ಏಜುಕೇಷನ್ ಸೊಸೈಟಿಯ ಆರ್.ಎಸ್ ಪ್ರೌಢಶಾಲೆ, ಗುಲ್ಲನ್‍ಪೇಟೆ ಶ್ರೀ ರಂಗನಾಥ ವಿದ್ಯಾಸಂಸ್ಥೆಯ ನವೋದಯ ಪ್ರೌಢಶಾಲೆ, ನವೋದಯ ವಿದ್ಯಾ ಸಂಸ್ಥೆಯ ನವೋದಯ ಪ್ರೌಢಶಾಲೆ ಲಕ್ಯಾ, ಗುರುದೇವ ಏಜುಕೇಷನ್ ಟ್ರಸ್ಟ್ ನ ಜ್ಞಾನಭಾರತಿ ಪ್ರೌಢಶಾಲೆ, ಕನಸು ಕಿಡ್ಸ್ ಏಜುಕೇಷನ್ ಟ್ರಸ್ಟ್ ಪ್ರಾಥಮಿಕ ಶಾಲೆ ವಿಜಯನಗರ, ಡಬ್ಲ್ಯೂಡಿ ಎಜ್ಯುಕೇಷನ್ ಸೊಸೈಟಿಯ ಸೆಕ್ರೆಡ್ ಹಾರ್ಟ್ ಸ್ಕೂಲ್, ಕಲ್ಯಾಣ ನಗರ, ಹೋಲಿ ಫ್ಯಾಮಿಲಿ ಸೇವಾ ಸಂಸ್ಥೆ ಸೆಂಟ್ ಜೇವಿಯರ್ ಹಿರಿಯ ಪ್ರಾಥಮಿಕ ಶಾಲೆ. ಕಡೂರು ತಾಲೂಕಿನ ಸುರತ್ನ ಎಜ್ಯುಕೇಷನ್ ಟ್ರಸ್ಟ್ ನ ಸಾಂಸ್ಕೃತಿಕ ವಿದ್ಯಾಶಾಲೆ ಹರುವನಹಳ್ಳಿ, ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ವಿದ್ಯಾಸಂಸ್ಥೆ, ಸೋಮೇಶ್ವರ ಪ್ರಾಥಮಿಕ ಶಾಲೆ ಅಂತರಘಟ್ಟ, ತರೀಕೆರೆಯ ಶ್ರೀ ವಿದ್ಯಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀ ಪಬ್ಲಿಕ್ ಶಾಲೆ ಅಜ್ಜಂಪುರ.
ಈ ಶಾಲೆಗಳ ಅನುಮತಿ ಅರ್ಜಿಗಳು ತಿರಸ್ಕೃತಗೊಂಡಿವೆ. ಅಲ್ಲದೆ ಇಂತಹ ಶಾಲೆಗಳನ್ನು ಅನಧಿಕೃತ ಶಾಲೆಗಳೆಂದು ಪರಿಗಣಿಸಿ ಶಿಕ್ಷಣ ಕಾಯ್ದೆ 1980ರ ನಿಯಮದಡಿ ಕ್ರಮವಹಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಂಜಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.