×
Ad

ಚಿಕ್ಕಮಗಳೂರು: ಇವಿಎಂ ನಿಷೇಧಕ್ಕೆ ಒತ್ತಾಯಿಸಿ ಅಂಚೆ ಪತ್ರ ಅಭಿಯಾನ

Update: 2019-07-03 20:30 IST

ಚಿಕ್ಕಮಗಳೂರು, ಜು.3: ಇವಿಎಂ ಯಂತ್ರವನ್ನು ನಿಷೇಧಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಬುಧವಾರ ಅಂಚೆ ಕಚೇರಿ ಎದುರು ಅಂಚೆ ಪತ್ರ ಅಭಿಯಾನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ 376 ಮತ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳಿಗೂ, ಎಣಿಕೆಯಾದ ಮತಗಳ ನಡುವೆ ದೊಡ್ಡ ಮಟ್ಟದ ಅಂತರ ಕಂಡು ಬಂದಿದ್ದು, ಬಿಜೆಪಿಯವರು ಇವಿಎಂ ಯಂತ್ರ ದುರುಪಯೋಗ ಪಡಿಸಿಕೊಂಡಿರುವ ಶಂಕೆ ದೇಶದಲ್ಲಿ ಜನರಲ್ಲಿ ಮೂಡಿದೆ ಎಂದು ಹೇಳಿದರು. 

ಮುಂದುವರೆದ ದೇಶಗಳಾದ ಫ್ರಾನ್ಸ್, ಬ್ರಿಟನ್, ಅಮೇರಿಕಾ, ಇಟಲಿ, ದೇಶಗಳಲ್ಲಿ  ಇವಿಎಂ ಯಂತ್ರಗಳ ಮೇಲೆ ವಿಶ್ವಾಸವಿಲ್ಲದ ಕಾರಣ ಇವಿಎಂ ಯಂತ್ರಗಳನ್ನು ನಿಷೇಧಿಸಿ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಲಾಗುತ್ತಿದೆ ಎಂದು ಹೇಳಿದ ಅವರು, ದೇಶದಲ್ಲಿಯೂ ಬಿಜೆಪಿಯವರು ಇವಿಎಂ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಇವಿಎಂ ಯಂತ್ರಗಳನ್ನು ನಿಷೇಧಿಸಿ ಹಳೆ ಮಾದರಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಆಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಅಭಿಯಾನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ವನಮಾಲಾ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾವಿತ್ರಿ, ನಗೀನಾ, ಜಿಲ್ಲಾ ಉಪಾಧ್ಯಕ್ಷೆ ವಸಂತಾ, ಮುಖಂಡರಾದ ರೂಪಾ ಆನಂದ್, ರೇವತಿ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News