ಜಿಂದಾಲ್ ಬಗ್ಗೆ ಆನಂದ್‌ ಸಿಂಗ್ ನನ್ನ ಜೊತೆ ಮಾತನಾಡಿಲ್ಲ: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-07-03 16:23 GMT

ಬೆಂಗಳೂರು, ಜು.3: ಜಿಂದಾಲ್ ವಿಚಾರದ ಕುರಿತು ಆನಂದ್‌ ಸಿಂಗ್ ನನ್ನ ಜೊತೆ ಯಾವುದೇ ಚರ್ಚೆ ಮಾಡಿಲ್ಲ. ಆದರೆ, ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವ ವಿಚಾರದ ಕುರಿತು ವಿಸ್ತೃತವಾದ ಪತ್ರವನ್ನು ಬರೆದಿದ್ದಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಬುಧವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಪುಟ ಉಪ ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಎಚ್.ಕೆ.ಪಾಟೀಲ್ ಹಾಗೂ ಆನಂದ್‌ಸಿಂಗ್ ಈ ಸಂಬಂಧ ಬರೆದಿರುವ ಪತ್ರಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಗುವುದು ಎಂದರು.

ಸಂಪೂರ್ಣವಾಗಿ ಎಲ್ಲ ವಿಚಾರಗಳ ಬಗ್ಗೆ ಅಧ್ಯಯನ ಮಾಡುತ್ತೇವೆ. ಆನಂತರ ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ. ಅಗತ್ಯವಿದ್ದಲ್ಲಿ ಜಿಂದಾಲ್ ಅವರನ್ನು ಕರೆದು ಮಾತನಾಡಿಸುತ್ತೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಇದೇ ವೇಳೆ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲೋ ಕುಳಿತು ರಾಜೀನಾಮೆ ನೀಡಿದರೆ ಆಗುವುದಿಲ್ಲ. ನಿಯಮಾನುಸಾರ ರಾಜೀನಾಮೆ ಸಲ್ಲಿಸಬೇಕು ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.

ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಿದ್ದೆ. ಅವರು ವರದಿ ಕೊಟ್ಟಿದ್ದಾರೆ. ಸಾಕಷ್ಟು ವಿಚಾರಗಳು ಆ ವರದಿಯಲ್ಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಜೊತೆಗೆ, ಒಂದು ಸಮನ್ವಯ ಸಮಿತಿಯನ್ನು ರಚನೆ ಮಾಡಿದ್ದೇವೆ. ಅಧಿಕಾರಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಬಾರದು. ತನಿಖೆ ವೇಳೆ ಪೊಲೀಸರು ಯಾವ ರೀತಿಯಲ್ಲಿ ವರ್ತಿಸಬೇಕು. ದೋಷಾರೋಪಣ ಪಟ್ಟಿ ಹಾಕಿದ ಮೇಲೆ ಪ್ರತಿಯೊಬ್ಬರ ಪಾತ್ರ ಏನು ಇರುತ್ತದೆ. ಅದೆಲ್ಲವನ್ನು ಮೌಲ್ಯಮಾಪನ ಮಾಡುವಂತಹದ್ದಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಪರಾಧ ಸಾಬೀತು ಪ್ರಮಾಣ ಹೆಚ್ಚಾಗಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಪೊಲೀಸ್ ಅಕಾಡೆಮಿಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಈ ಎಲ್ಲ ವಿಷಯಗಳನ್ನು ಅಲ್ಪ ಸಮಯದಲ್ಲಿ ವಿವರಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆಯು ಹೆಚ್ಚು ಜನಸ್ನೇಹಿಯಾಗಿರುವ ನಿಟ್ಟಿನಲ್ಲಿ ನಾವು ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳನ್ನು ಮತ್ತಷ್ಟು ಬಲಪಡಿಸಲಾಗುವುದು. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಆ ಮೂಲಕವು ಪೊಲೀಸರಿಗೆ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಸಮಗ್ರ ಬದಲಾವಣೆಗಳನ್ನು ಇಲಾಖೆಯಲ್ಲಿ ತರಲು ಚಿಂತನೆ ನಡೆದಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News