ಪಶ್ಚಿಮಘಟ್ಟದಲ್ಲಿ ನೀರಾವರಿ ಯೋಜನೆ ಸೂಕ್ತವಲ್ಲ: ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆಯಿಂದ ಸರಕಾರಕ್ಕೆ ಶಿಫಾರಸ್ಸು

Update: 2019-07-03 16:25 GMT

ಬೆಂಗಳೂರು, ಜು.3: ಪಶ್ಚಿಮಘಟ್ಟಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಶರಾವತಿ ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ ಇನ್ನಾವುದೇ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆಯು ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಈಗಾಗಲೇ ಅನೇಕ ಯೋಜನೆಗಳನ್ನು ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಮಧ್ಯೆ ಎತ್ತಿನಹೊಳೆ ಯೋಜನೆ ಬೇರೆ ಬರುತ್ತಿದೆ. ಮುಂದೆಯೂ ಇಂತಹ ಯೋಜನೆಗಳನ್ನು ಕೈಗೊಂಡರೆ, ಅದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ನಗರದ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿದ ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಡಾ.ಎಸ್. ಚಂದ್ರಶೇಖರ್, ನಂತರ ಅರಣ್ಯ ಸಚಿವ ಸತೀಶ ಜಾರಕಿಹೊಳಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ಸುಮಾರು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ ಸಿದ್ಧಪಡಿಸಿದ ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ಅಧ್ಯಯನ ಮತ್ತು ಶಿಫಾರಸ್ಸುಗಳ ಅಂತಿಮ ವರದಿಯಲ್ಲಿರುವ ಅಂಶಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಮನವಿ ಮಾಡಿದರು.

ಪಶ್ಚಿಮಘಟ್ಟದ ಸಾವಿರಾರು ಎಕರೆ ಪ್ರದೇಶಗಳಲ್ಲಿ ಈಗಾಗಲೇ ಅರಣ್ಯ ಜಲ ವಿದ್ಯುತ್ ಸ್ಥಾವರ, ರೈಲು ಹಳಿಗಳು, ವಿದ್ಯುತ್ ಮಾರ್ಗಗಳು ಮತ್ತಿತರ ಯೋಜನೆಗಳು ಸ್ಥಾಪನೆಗೊಂಡಿವೆ. ಇದೇ ರೀತಿ ಮುಂದುವರಿದರೆ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಸ್ಥಾವರಗಳ ಕುರಿತು ಪುನರ್ ವಿಮರ್ಶೆ ಮಾಡುವ ಅಗತ್ಯವಿದೆ.

ಹಾಗೆಯೆ ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ 22 ಮುಖ್ಯ ನದಿಗಳು ಮತ್ತು 180 ಉಪನದಿಗಳು ಹುಟ್ಟುತ್ತವೆ. ಆ ಎಲ್ಲ ನದಿ ಮೂಲಗಳನ್ನು ಸಂರಕ್ಷಿಸಿ, ಅವುಗಳು ಸದಾ ಜೀವನದಿಗಳಾಗಿ ಇರುವಂತೆ ಕಾಪಾಡುವುದು ಆದ್ಯ ಕರ್ತವ್ಯ. ಆದರೆ, ನದಿ ದಂಡೆಗಳಲ್ಲಿ ಇರುವ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರವಾಸಿಗಳು ಬಹಿರ್ದೆಸೆಗೆ ಹೋಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಪ್ಪಿಸಲು ನದಿಗಳ ಸಮೀಪ ಹಾಗೂ ಶಾಲೆಗಳು, ಆರೋಗ್ಯ ಕೇಂದ್ರಗಳ ಸಮೀಪ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ತುರ್ತು ಅಗತ್ಯವಿದೆ ಎಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News