ದುಬೈನಲ್ಲಿ ಉದ್ಯಮ ಆರಂಭಿಸಲು 10 ಪ್ರಸ್ತಾವನೆಗಳು ಆಯ್ಕೆ
ಬೆಂಗಳೂರು, ಜು.3: ದುಬೈನ ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಂಗವಾಗಿರುವ ನವೋದ್ಯಮ ಜಾಲವು ಇತ್ತೀಚಿಗೆ ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ಬೃಹತ್ ರೋಡ್‌ಶೋವನ್ನು ಹಮ್ಮಿಕೊಂಡಿದ್ದು, ದುಬೈನಲ್ಲಿ ಉದ್ಯಮ ಆರಂಭಿಸಲು 10 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ರೋಡ್‌ಶೋನಲ್ಲಿ ಪ್ರಮುಖವಾಗಿ ನವೋದ್ಯಮಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಸ್ತಾವನೆಗಳನ್ನು ಸಲ್ಲಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಬೆಂಗಳೂರು, ಹೊಸದಿಲ್ಲಿ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ 200ಕ್ಕೂ ಅಧಿಕ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಪರಿಣಿತ ತೀರ್ಪುಗಾರರು 10 ಅನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಆಯ್ಕೆಯಾದವರಿಗೆ ದುಬೈನಲ್ಲಿ ಉದ್ಯಮ ಆರಂಭಿಸಲು ಅವಕಾಶ ನೀಡಲಾಗುತ್ತಿದೆ.
ರೋಡ್‌ಶೋ ಉದ್ಘಾಟಿಸಿ ಮಾತನಾಡಿದ ಭಾರತದ ರಾಯಭಾರಿ ಎಚ್.ಇ.ಅಹಮದ್ ಅಲ್ಬನ್ನಾ, ಯುಎ ಹಾಗೂ ಭಾರತದ ನಡುವಿನ ಸಂಬಂಧ ಅಭೂತಪೂರ್ವವಾದುದಾಗಿದೆ. ಈ ದೇಶಗಳ ನಡುವಿನ ಅನೇಕ ಐತಿಹಾಸಿಕ ಒಪ್ಪಂದಗಳು ನಡೆದಿವೆ. ಪರಸ್ಪರ ಮೈತ್ರಿಯಿಂದ ಉಭಯ ರಾಷ್ಟ್ರಗಳ ಮೈತ್ರಿ ಮತ್ತಷ್ಟು ಪಕ್ವಗೊಳ್ಳುತ್ತದೆ. ಅಲ್ಲದೆ, ಸೌಹಾರ್ದ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಜತೆಗೆ, ಔದ್ಯೋಮಿಕವಾಗಿ ಹೆಚ್ಚು ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದುಬೈನಲ್ಲಿ ಅಲ್ಲಿನ ಸರಕಾರ ಖಾಯಂ ಪೌರತ್ವದ ಹಕ್ಕು ಪಡೆಯಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಗೋಲ್ಡನ್ ಕಾರ್ಡ್ ಅಡಿಯಲ್ಲಿ ಹೂಡಿಕೆದಾರರಿಗೆ ಶಾಶ್ವತ ಪೌರತ್ವ ನೀಡಲಾಗುವುದು. ಇದರೊಂದಿಗೆ ಉದ್ಯಮಗಳಿಗಾಗಿ ಐದು ವರ್ಷಗಳ ಅವಧಿಗೆ ಹೊಸ ವೀಸಾ ಪರಿಚಯ ಮಾಡಿಕೊಡಲಾಗಿದೆ. ಇದರಲ್ಲಿ ಭಾರತೀಯರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುವುದು. ಎಲ್ಲ ಪ್ರಯತ್ನಗಳು ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲಿವೆ ಎಂದು ನುಡಿದರು.