ಹಾಸನ: ಬಸ್ ಪಾಸ್ ನೀಡಲು ಒತ್ತಾಯಿಸಿ ಸಚಿವ ರೇವಣ್ಣ, ಜಿಲ್ಲಾಧಿಕಾರಿಗೆ ವಿದ್ಯಾರ್ಥಿಗಳಿಂದ ಮನವಿ

Update: 2019-07-03 17:46 GMT

ಹಾಸನ, ಜು.3: ಬಸ್‍ಪಾಸ್ ವಿತರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವರಿ ಸಚಿವ ಹೆಚ್.ಡಿ. ರೇವಣ್ಣ, ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಸರಕಾರಿ ಗೃಹ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರಕಾರಿ ಗೃಹ ವಿಜ್ಞಾನ ಕಾಲೇಜ್ ನಲ್ಲಿರುವ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮಿಣ ಪ್ರದೇಶದಿಂದ ಬಂದು ವಾಪಸ್ ಹೋಗಬೇಕು. ಕಳೆದ 20 ದಿನಗಳಿಂದ ತರಗತಿಗಳು ಮತ್ತು ಪ್ರಾಯೋಗಿಕ ತರಗತಿಗಳು ಆರಂಭವಾಗಿದೆ. ಬಸ್ ಪಾಸನ್ನು ಇದುವರೆಗೂ ನೀಡದೇ ಪ್ರತಿನಿತ್ಯ ಓಡಾಡಲು ಸಮಸ್ಯೆ ಎದುರಿಸಬೇಕಾಗಿದೆ. ಪ್ರತಿನಿತ್ಯ ನೂರಾರು ರೂ. ಖರ್ಚು ಮಾಡಿ ಕಾಲೇಜುಗಳಿಗೆ ಬರಬೇಕಾಗಿದೆ. ಪ್ರತಿನಿತ್ಯ ಹಣ ಖರ್ಚು ಮಾಡಿ ಬರುವುದಕ್ಕೆ ಆರ್ಥಿಕ ತೊಂದರೆ ಎದುರಾಗಿದೆ. ಅನೇಕರು ಬಸ್‍ಪಾಸ್ ಇಲ್ಲದೆ ತರಗತಿಗಳಿಗೆ ಇದುವರೆಗೂ ಹಾಜರಾಗಲು ಸಾಧ್ಯವಾಗದೇ ವಂಚಿತರಾಗಿದ್ದಾರೆ ಎಂದು ದೂರಿದರು.

ಈ ಬಗ್ಗೆ ಪ್ರಾಂಶುಪಾಲರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ತಕ್ಷಣ ಬಸ್‍ಪಾಸ್ ನೀಡುವಂತೆ ಮನವಿ ಪತ್ರ ಸಲ್ಲಿಸಿ ದೂರವಾಣಿ ಮೂಲಕ ವಿನಂತಿಸಿದ್ದರೂ ಯಾವ ಪ್ರಯೋಜನವಾಗಿಲ್ಲ ಎಂದ ಅವರು, ಕೂಡಲೇ ಬಸ್‍ಪಾಸ್ ವಿತರಿಸಲು ಸಾರಿಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನಿಡುವಂತೆ ಮನವಿ ಸಲ್ಲಿಸಿದರು.

ಅರಸೀಕೆರೆ ಕ್ಷೇತ್ರ ಶಾಸಕ ಕೆ.ಎಂ.ಶಿವಲಿಂಗೇಗೌಡರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವುದನ್ನು ಕಂಡ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಬಸ್‍ಪಾಸ್ ಸಮಸ್ಯೆ ಬಗ್ಗೆ ಹೇಳಿಕೊಂಡರು. ಶಾಸಕರು ತಕ್ಷಣ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು ಡಿಸಿ ಕಚೇರಿ ಆವರಣಕ್ಕೆ ಕಾರಿನಲ್ಲಿ ಬರುತ್ತಿದ್ದಂತೆ ವಿದ್ಯಾರ್ಥಿಗಳು ಅಲ್ಲಿಯೂ ಮುತ್ತಿಗೆ ಹಾಕಿ ಬಸ್‍ಪಾಸ್ ಬಗ್ಗೆ ತಿಳಿಸಿದರು. ಕೆಲ ಸಮಯದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಕೂಡ ಕಚೇರಿಯಿಂದ ಹೊರ ಬಂದು ರೇವಣ್ಣನವರ ಹತ್ತಿರ ಬಂದರು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸರಕಾರಿ ಗೃಹ ವಿಜ್ಞಾನ ಕಾಲೇಜ್ ವಿದ್ಯಾರ್ಥಿಗಳಾದ ಚಂದನ್, ವಿನೂತಾ, ಕೀರ್ತಾನ, ಯಶಸ್ವಿನಿ, ಪೃಥ್ವಿನಿ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News