ಹೀಗಿರಲಿದೆ ಎಸೆಸೆಲ್ಸಿ ನೂತನ ಪ್ರಶ್ನೆ ಪತ್ರಿಕೆ

Update: 2019-07-04 12:54 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.4: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಸಕ್ತ ಸಾಲಿನಿಂದ ಎಸೆಸೆಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾವಣೆ ತಂದು, ಹೊಸ ಮಾದರಿ ಪ್ರಶ್ನೆ ಪತ್ರಿಕೆ ಜಾರಿ ಮಾಡಲು ಮುಂದಾಗಿದೆ.

ವಿದ್ಯಾರ್ಥಿಗಳು ಕಲಿಕಾ ಗುಣಮಟ್ಟವನ್ನು ವೃದ್ಧಿಸಲು ಕಂಠಪಾಠ ಮಾಡುವ ಪದ್ಧತಿಯನ್ನು ತಪ್ಪಿಸಿ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆಯನ್ನು ಬೆಳೆಸಲು ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಲು ಮುಂದಾಗಿದೆ.

ಕೌಶಲ್ಯ ಹಾಗೂ ವಿವರಣಾತ್ಮಕ ಹೊಂದಿರುವ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿ, ಪ್ರಶ್ನೆಗಳ ಸಂಖ್ಯೆಗಳನ್ನು ಕಡಿಮೆ ಮಾಡಿ, ಕಠಿಣತೆಯ ಮಟ್ಟವನ್ನು ಎಲ್ಲ ವಿಷಯಗಳಲ್ಲೂ ಸಮಾನವಾಗಿ ರೂಪಿಸಿ, ಏಕ ರೂಪ ತರಲು ಮುಖ್ಯಾಂಶಾಧಾರಿತ ಅಥವಾ ವಿಷಯಾಧಾರಿತ ಅಂಕಗಳನ್ನು ಹಂಚಿಕೆ ಮಾಡಲು ಇಲಾಖೆ ಮುಂದಾಗಿದೆ.

ಇದರಿಂದ ಪ್ರಯೋಜನ ಏನು?: ಪ್ರಶ್ನೆಪತ್ರಿಕೆಯಲ್ಲಿ 40 ಪ್ರಶ್ನೆಗಳ ಬದಲಾಗಿ 38 ಪ್ರಶ್ನೆಗಳಿರುತ್ತದೆಯೇ ಹೊರತು ಹೆಚ್ಚಿನ ಬದಲಾವಣೆ ಏನೂ ಇರುವುದಿಲ್ಲ. ಕಳೆದ ವರ್ಷ ನೀಲ ನಕಾಶೆ ನೀಡಿರುವುದಿಲ್ಲ. ಆದರೆ ಘಟಕವಾರು ಅಂಕಗಳ ಹಂಚಿಕೆ ನೀಡಲಾಗಿತ್ತು. ಇದರಿಂದ ಶಿಕ್ಷಕರು ಕಡಿಮೆ ಅಂಕಗಳ ಹಂಚಿಕೆ ಅಂದರೆ 1 ಅಥವಾ 2 ಅಂಕ ಇರುವಂತಹ ಪಾಠಗಳನ್ನು ಬೋಧಿಸದೇ ಇರುವಂತಹ ಸಂದರ್ಭಗಳು ಅಧಿಕವಾಗಿರುತ್ತದೆ. ಹಾಗಾಗಿ ಈ ವರ್ಷದಿಂದ ವಿಷಯಾಧಾರಿತ ಅಂಕಗಳ ಹಂಚಿಕೆಯನ್ನು ನಿಗದಿ ಮಾಡಲಾಗಿದ್ದು ಈ ಕ್ರಮ ಹೆಚ್ಚು ವೈಜ್ಞಾನಿಕವಾಗಿದ್ದು ಹಾಗೂ ತಾರ್ಕಿಕವಾದದ್ದು ಆಗಿದೆ ಎಂದು ಮಂಡಳಿ ಹೇಳಿದೆ.

ಈ ರೀತಿ ಮಾಡುವುದರಿಂದ ಶಿಕ್ಷಕರು ಎಲ್ಲ ಅಧ್ಯಾಯಗಳನ್ನು ಬೋಧನೆ ಮಾಡುವುದು ಕಡ್ಡಾಯವಾಗಿರುತ್ತದೆ. ಪ್ರಸ್ತುತ ಪರೀಕ್ಷಾ ಪದ್ಧತಿಯನ್ನು ಸಾಧಾರಣವಾಗಿ ಕೇಳಿ ಬರುವ ಸಾಮೂಹಿಕ ನಕಲನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಮೂಡಿಸಬಹುದು. ದೀರ್ಘ ಉತ್ತರದ ಪ್ರಶ್ನೆಗಳಿಂದ ಮಕ್ಕಳಲ್ಲಿ ಬರವಣಿಗೆಯ ಕೌಶಲ್ಯ ಮೂಡಿಸಬಹುದು. ಅಭಿವ್ಯಕ್ತಿ ಕೌಶಲ್ಯ ಬೆಳೆಸುತ್ತದೆ. ಶಿಕ್ಷಕರಲ್ಲಿ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಪ್ರಶ್ನೆ ಪ್ರತಿಕೆಯ ಸ್ವರೂಪ ಹೇಗಿರಲಿದೆ: ಬಹು ಆಯ್ಕೆ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಒಂದು ಅಂಕದ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎರಡು ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 16 ರಿಂದ 8 ಕ್ಕಿಳಿಸಲಾಗಿದೆ. ಮೂರು ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 6 ರಿಂದ 9ಕ್ಕೆ ಹೆಚ್ಚಿಸಲಾಗಿದೆ. ಹೊಸದಾಗಿ 5 ಅಂಕದ ಪ್ರಶ್ನೆ ಒಂದನ್ನು ಸೇರಿಸಲಾಗಿದೆ. ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.

ಇನ್ನುಳಿದಂತೆ 2017-18, 2018-19 ಹಾಗೂ ಹಿಂದಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಈ ಮಾದರಿಯ ಪ್ರಶ್ನೆ ಪತ್ರಿಕೆಯಲ್ಲಿ ಪರೀಕ್ಷೆ ಬರೆಯಬೇಕು ಎಂದು ಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News