ಹೆಚ್ಚುತ್ತಿರುವ ಆನ್‍ಲೈನ್ ವಂಚನೆ: ಎಟಿಎಂ ಕಾರ್ಡ್ ವಿವರ ಪಡೆದು 40 ಸಾವಿರ ರೂ. ದೋಚಿದ ವಂಚಕರು
ಶಿವಮೊಗ್ಗ, ಜು. 4: ಆನ್‍ಲೈನ್ ವಂಚಕರ ಜಾಲಕ್ಕೆ ಸಿಲುಕಿ ಅಮಾಯಕರು ಮೋಸ ಹೋಗುವ ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಂಚಕರ ಜಾಲಕ್ಕೆ ಸಿಲುಕಿ ಶಿವಮೊಗ್ಗ ನಗರದ ವ್ಯಕ್ತಿಯೋರ್ವರು ಸಾವಿರಾರು ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಲಷ್ಕರ್ ಮೊಹಲ್ಲಾದ ಯಾಲಕಪ್ಪನ ಕೇರಿಯ 3ನೇ ತಿರುವಿನ ನಿವಾಸಿ ಅಸ್ಲಾಂ ಪಾಷಾ ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. 40 ಸಾವಿರ ರೂ.ಗಳನ್ನು ಇವರ ಬ್ಯಾಂಕ್ ಖಾತೆಯಿಂದ ವಂಚಕರು ಎಗರಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಜು. 3 ರಂದು ಅಸ್ಲಂ ಪಾಷಾರವರ ಮೊಬೈಲ್‍ಗೆ ವಂಚಕನೋರ್ವ ಕರೆ ಮಾಡಿದ್ದಾನೆ. ಸೌತ್ ಇಂಡಿಯನ್ ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. 'ನಿಮ್ಮ ಎಟಿಎಂ ಕಾರ್ಡ್ ಆದಷ್ಟು ಶೀಘ್ರವಾಗಿ ರದ್ದುಗೊಳ್ಳಲಿದ್ದು, ನವೀಕರಣ ಮಾಡಿಕೊಡುವುದಾಗಿ' ಸುಳ್ಳು ಹೇಳಿದ್ದಾನೆ.
ಎಟಿಎಂ ಕಾರ್ಡ್ ಮೇಲಿರುವ ಸಂಖ್ಯೆಗಳ ವಿವರ ಪಡೆದುಕೊಂಡಿದ್ದಾನೆ. ತದನಂತರ ಅವರ ಮೊಬೈಲ್‍ಗೆ ಬಂದ ಒಟಿಪಿ ನಂಬರ್ ತೆಗೆದುಕೊಂಡು ಆನ್‍ಲೈನ್ ಮೂಲಕ 40 ಸಾವಿರ ರೂ.ಗಳನ್ನು ಡ್ರಾ ಮಾಡಿಕೊಂಡಿದ್ದಾನೆ. ವಂಚನೆಗೊಳಗಾಗಿರುವುದು ಅರಿವಾಗುತ್ತಿದ್ದಂತೆ ಅಸ್ಲಂ ಪಾಷಾರವರು ಸಿಇಎನ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.