ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜಕ್ಕೆ ಅವಮಾನ: ಎಸ್‌ಡಿಪಿಐ

Update: 2019-07-04 14:59 GMT

ಬೆಂಗಳೂರು, ಜು.4: ಪುತ್ತೂರಿನಲ್ಲಿ ದಲಿತ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜಕ್ಕೆ ಅತ್ಯಂತ ಅವಮಾನಕಾರಿಯಾಗಿದ್ದು, ಸಮಾಜದಲ್ಲಿ ಕ್ರೌರ್ಯ, ಶೋಷಣೆ, ಸ್ತ್ರೀ ಹಿಂಸೆ, ಪೀಡನೆ ಎಷ್ಟೊಂದು ಹೀನವಾಗಿ ಹಾಗೂ ಗಾಢವಾಗಿ ಬೇರೂರುತ್ತಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ನಾಗರಿಕ ಸಮಾಜವು ತಲೆ ತಗ್ಗಿಸುವಂತಹ ಇಂತಹ ಘಟನೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸಿದೆ.

ದಲಿತ ಸಮುದಾಯದ ಹೆಣ್ಣು ಮಗಳನ್ನು ಬಹಳ ಚಾಣಾಕ್ಷತನದಿಂದ ತಮ್ಮ ಬಲೆಗಳಲ್ಲಿ ಕೆಡವಿರುವ ದುಷ್ಕರ್ಮಿಗಳು, ಆ ಹೆಣ್ಣು ಮಗಳ ಮತ್ತು ಆಕೆಯ ಕುಟುಂಬದ ಜೀವನ ಹಾಗೂ ಭವಿಷ್ಯಕ್ಕೆ ಕಂಟಕವಾಗಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

ದೇಶದಾದ್ಯಂತ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ದಲಿತ ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡುವುದು, ಥಳಿಸುವುದು, ದಲಿತರ ಮನೆಗಳನ್ನು ಸುಡುವುದು ನಿತ್ಯದ ಸುದ್ದಿಯಾಗಿಬಿಟ್ಟಿದೆ. ರಾಜಸ್ತಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ದಲಿತ ಯುವಕರು ಮೀಸೆ ಬಿಟ್ಟಿದ್ದಕ್ಕೆ, ಜೀನ್ಸ್ ಹಾಕಿದ್ದಕ್ಕೆ, ಮದುಮಗ ಕುದುರೆಯಲ್ಲಿ ಸಾಗಿದ್ದಕ್ಕೆ ದಾಳಿಯಾಗಿದ್ದು ಅಥವಾ ಹತ್ಯೆಗೈದ ಪ್ರಕರಣಗಳು ಕೂಡಾ ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವ ಸರಕಾರ ಬಂದು 70 ವರ್ಷಗಳು ಕಳೆದರೂ ದೇಶದಲ್ಲಿ ನಡೆಯುವ ಇಂತಹ ಭೀಕರ ಘಟನೆಗಳು ಈ ದೇಶದ ಜಾತಿ ವ್ಯವಸ್ಥೆ ಹಾಗೂ ತಾರತಮ್ಯ ಹಿಂಸಾ ಪ್ರವೃತ್ತಿಗೆ ಕನ್ನಡಿಯಾಗಿದೆ. ಅಲ್ಲದೆ ದೇಶದಾದ್ಯಂತ ನಡೆಯುವ ‘ಲಿಂಚಿಂಗ್’ ಘಟನೆಗಳಲ್ಲಿ ಮುಸ್ಲಿಂ ಯುವಕರನ್ನು ಹತ್ಯೆಗೈಯ್ಯುತ್ತಿರುವುದು ಅತ್ಯಂತ ಸಾಮಾನ್ಯವಾಗಿದೆ ಎಂದು ರಿಯಾಝ್ ಫರಂಗಿಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ಬಳಿಕ ಇಂತಹ ನೂರಾರು ಭೀಕರ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಕೇಂದ್ರ ಸರಕಾರವಾಗಲಿ, ವಿವಿಧ ರಾಜ್ಯಗಳಲ್ಲಿರುವ ಬಿಜೆಪಿ ಸರಕಾರವಾಗಲಿ ಯಾವುದೇ ಆತಂಕ ವ್ಯಕ್ತಪಡಿಸದೇ ಇರುವುದು ಅತ್ಯಂತ ಖೇದಕರ. ಸರಕಾರ ಕಿಂಚಿತ್ತೂ ಕ್ರಮ ಕೈಗೊಳ್ಳದೆ ಕೊಲೆಗಡುಕರಿಗೆ ಮೌನ ಸಮ್ಮತ ನೀಡುತ್ತಿದೆ ಎಂದು ಅವರು ದೂರಿದ್ದಾರೆ. ದಲಿತ ಮತ್ತು ಮುಸ್ಲಿಂ ಸಮುದಾಯದ ಸಹನೆಯನ್ನು ಪರೀಕ್ಷಿಸುತ್ತಿರುವ ಸರಕಾರಗಳು ಹಾಗೂ ಸವರ್ಣಿಯರ ವಿರುದ್ಧ ಬಹುಜನ ಸಮಾಜ ಎಚ್ಚೆತ್ತುಕೊಂಡು ಪ್ರತಿರೋಧ ತೋರುವ ಅಗತ್ಯವಿದೆ ಎಂದು ರಿಯಾಝ್ ಫರಂಗಿಪೇಟೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News