×
Ad

ಗೊಂದಲಕ್ಕೆ ಅವಕಾಶ ಇಲ್ಲದೆ ಶಿಕ್ಷಕರ ವರ್ಗಾವಣೆ ಪೂರ್ಣಗೊಳ್ಳಲಿದೆ: ಸಚಿವ ಶ್ರೀನಿವಾಸ್

Update: 2019-07-04 20:31 IST

ಬೆಂಗಳೂರು, ಜು.4: ಶಿಕ್ಷಕರ ವರ್ಗಾವಣೆಯನ್ನು ಪಾರದರ್ಶಕವಾಗಿ ಮಾಡಬೇಕೆನ್ನುವ ಉದ್ದೇಶದ ಹಿನ್ನೆಲೆಯಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಈ ವರ್ಗಾವಣೆಯನ್ನು ಯಾವುದೇ ಕಾರಣಕ್ಕೂ ರದ್ದುಪಡಿಸುವ ಅಥವಾ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿ ರಾಜ್ಯದ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯಂತೆ ನಡೆಯುತ್ತಿದ್ದು, ವರ್ಗಾವಣೆಯಲ್ಲಿ ಕಂಡು ಬರುವ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚುವರಿ ಶಿಕ್ಷಕರ ವರ್ಗಾವಣೆ, ಪತಿ-ಪತ್ನಿ ಪ್ರಕರಣಗಳಡಿಯ ವರ್ಗಾವಣೆ, ಶಿಕ್ಷಕರ ಕಡ್ಡಾಯ ವರ್ಗಾವಣೆಯಡಿಯಲ್ಲಿ ಗೊಂದಲಗಳು ಕಂಡು ಬಂದಿರುವುದನ್ನು ವ್ಯವಸ್ಥಿತವಾಗಿ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಶಿಕ್ಷಕರು ತಪ್ಪು ಮಾಹಿತಿ, ದಾಖಲೆ ನೀಡಿ ವರ್ಗಾವಣೆ ಕೋರಿರುವ ಪ್ರಕರಣಗಳು ಕಂಡು ಬಂದಿದ್ದು, ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶ್ರೀನಿವಾಸ್ ನಿರ್ದೇಶನ ನೀಡಿದರು.

ಶಿಕ್ಷಣ ಇಲಾಖೆಯ ನಿಯಮಾವಳಿಗಳನ್ವಯ ಒಂದನೇ ತರಗತಿಯಿಂದ ಏಳನೆ ತರಗತಿಯವರೆಗೆ ಬೋಧಿಸುವ ಶಿಕ್ಷಕರ ಈ ಹಿಂದಿನ ನಿಯಮಾವಳಿಗಳನ್ನು ಮುಂದುವರೆಸಲಾಗುವುದು. ಇತ್ತೀಚೆಗೆ ಸರಕಾರವು ಹೊರಡಿಸಿದ ಟಿಪ್ಪಣಿಯನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿದ ಅವರು, ಹೆಚ್ಚುವರಿ ಶಿಕ್ಷಕರನ್ನು ವಿಶೇಷ ನೇಮಕಾತಿ ನಿಯಮವನ್ನು ರೂಪಿಸಿ, ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ನೇಮಕಾತಿ ಸಂದರ್ಭದಲ್ಲಿ ಖಾಲಿಯಾದ ಹುದ್ದೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನೇಮಕಾತಿಗೆ ಒತ್ತು ನೀಡಲಾಗುವುದು ಎಂದರು.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಗೊಂದಲವನ್ನು ನಿವಾರಿಸಲು ಕಾನೂನು ತಜ್ಞರು, ಶಿಕ್ಷಣ ತಜ್ಞರು, ಶಿಕ್ಷಕರ ಕ್ಷೇತ್ರದ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳ ಸಮಿತಿಯನ್ನು ರಚಿಸಿ, ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂದು ಶ್ರೀನಿವಾಸ್ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯರು ದೀರ್ಘಕಾಲದ ಅನುಭವಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಈ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ, ಹೆಚ್ಚು ಶಾಲೆಗಳನ್ನು ಪ್ರಾರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.

ಶಾಲೆಗಳನ್ನು ಸಮಗ್ರವಾಗಿ ಬಲಪಡಿಸಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗೆ ಒಂದೇ ಆವರಣದಲ್ಲಿ ಇರುವಂತೆ ನೋಡಿಕೊಳ್ಳುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆಂದು ಶ್ರೀನಿವಾಸ್ ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಆಯನೂರು ಮಂಜುನಾಥ್, ಶ್ರೀಕಂಠೇಗೌಡ, ಎಸ್.ವಿ.ಸಂಕನೂರು, ಅರುಣ್ ಶಹಾಪುರ, ಮರಿತಿಬ್ಬೇಗೌಡ, ಚೌಡರೆಡ್ಡಿ ತೂಪಲ್ಲಿ, ನಾರಾಯಣಸ್ವಾಮಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಗದೀಶ್, ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News