ಮೈಷುಗರ್, ಪಿಎಸ್‍ಎಸ್‍ಕೆ ಆರಂಭಿಸಲು ಆಗ್ರಹ: ಜು.8 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ
ಮಂಡ್ಯ, ಜು.4: ಸರಕಾರಿ ಸ್ವಾಮ್ಯದ ಮೈಷುಗರ್ ಹಾಗೂ ಸಹಕಾರ ಕ್ಷೇತ್ರದ ಪಿಎಸ್‍ಎಸ್‍ಕೆ ಪುನರಾರಂಭಿಸಲು ಒತ್ತಾಯಿಸಿ ಜು.8ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಿರ್ಧರಿಸಿದೆ.
ನಗರದ ಪ್ರವಾಸಿ ಮಂದಿರಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕಾರ್ಖಾನೆಗಳ ಆರಂಭಕ್ಕೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕ್ರಮ ವಹಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಲಾಗಿದೆ.
ನೀರಿಲ್ಲದೆ ಒಣಗಿ ಹೋದ ಕಬ್ಬಿನಿಂದ ಕಂಗಾಲಾಗಿರುವ ರೈತರಿಗೆ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಬೇಕು. ಅಳಿದುಳಿದ ಬೆಳೆಗಳಿಗೆ ತೊಂದರೆಯಾಗದಂತೆ ನೀರು ಬಿಡುಗಡೆ ಮಾಡಬೇಕೆಂದು ಸಭೆ ಒತ್ತಾಯಿಸಿದೆ.
ಖಾಸಗಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಸಭೆ ನಡೆಸಿ ರೈತರಿಗೆ ನೀಡಬೇಕಾಗಿರುವ ಬಾಕಿ ಹಣ ಪಾವತಿಗೆ ಕ್ರಮವಹಿಸಿರುವುದಕ್ಕೆ ಜಿಲ್ಲಾಧಿಕಾರಿ ಅವರನ್ನು ಅಭಿನಂದಿಸಿದ್ದು, ತಮ್ಮ ಬೇಡಿಕೆಯನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲು ಕೋರಲಾಗಿದೆ.
ಡಾ.ಎನ್.ರವೀಂದ್ರ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಚಿಂತಕ ಪ್ರೊ.ಹುಲ್ಕೆರೆ ಮಹದೇವ, ರೈತಸಂಘದ ಶಂಭೂನಹಳ್ಳಿ ಸುರೇಶ್, ಲತಾ ಶಂಕರ್, ಹನಿಯಂಬಾಡಿ ನಾಗರಾಜು, ಬಿಜೆಪಿಯ ಸಿ.ಟಿ.ಮಂಜುನಾಥ್, ಸಿ.ಕೆ.ರಾಮೇಗೌಡ. ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಸ್ವಾಭಿಮಾನಿ ಸೇನೆಯ ಸಿದ್ದರಾಜು ಹೊಸಳ್ಳಿ, ಅಖಿಲ ಭಾರತ ವೀರಶೈವ ಮಹಾಸಭಾದ ಚಂದ್ರಶೇಖರ್, ತಾಪಂ ಸದಸ್ಯರಾದ ರಜಿನಿ ಕುಮಾರ್, ಹುಳ್ಳೇನಹಳ್ಳಿ ಸುರೇಶ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಬೀವುಲ್ಲಾ, ಅಭಿಲಾಷ್, ಪ್ರಗತಿಪರ ಹೋರಾಟಗಾರರಾದ ನವೀನ್ ಕುಮಾರ್ ಜಿ.ಬಿ., ಷಣ್ಮುಖೇಗೌಡ, ಎಂ.ಬಿ.ನಾಗಣ್ಣಗೌಡ, ಇತರರು ಸಭೆಯಲ್ಲಿ ಭಾಗವಹಿಸಿದ್ದರು.