ಚಂಬಲ್ ಸಿನಿಮಾ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
Update: 2019-07-04 22:21 IST
ಬೆಂಗಳೂರು, ಜು.4: ನೀನಾಸಂ ಸತೀಶ್ ಅಭಿನಯದ ಚಂಬಲ್ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಿ.ನರೇಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಚಿತ್ರದಲ್ಲಿ ನಮ್ಮ ಮಗನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಅಂಶಗಳನ್ನು ಸೇರಿಸಲಾಗಿದೆ ಎಂದು ಡಿ.ಕೆ.ರವಿ ಪೋಷಕರು ಆರೋಪಿಸಿದ್ದರು. ಚಿತ್ರಕ್ಕೆ 2018ರ ನ.30ರಂದು ನೀಡಲಾಗಿರುವ ಸೆನ್ಸಾರ್ ಪ್ರಮಾಣ ಪತ್ರ ವಾಪಸ್ಸು ಪಡೆಯಬೇಕೆಂದು ಅರ್ಜಿದಾರರು ಕೋರಿದ್ದರು. ಈ ಚಿತ್ರ ಡಿ.ಕೆ.ರವಿ ಅವರ ಜೀವನಾಧಾರಿತವಲ್ಲ. ಚಿತ್ರದಲ್ಲಿ ಯಾವುದೇ ವ್ಯಕ್ತಿಯ ಚಾರಿತ್ರ ಹರಣವಾಗಿಲ್ಲ ಎಂದು ಸರಕಾರದ ಪರ ವಕೀಲರು ವಾದಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.