ಶಾಸಕರ ಸಮ್ಮುಖದಲ್ಲೇ ಸೆಸ್ಕ್ ಅಧಿಕಾರಿಗಳಿಗೆ ತರಾಟೆ

Update: 2019-07-04 17:11 GMT

ನಾಗಮಂಗಲ, ಜು.4: ಸೆಸ್ಕ್ ಅಧಿಕಾರಿಗಳು ಹೊಟ್ಟೆಗೆ ಅದೇನು ತಿನ್ನುತ್ತಾರೋ. ದುಡ್ಡು ಕೊಟ್ಟರಷ್ಟೆ ಇವರ ಬಳಿ ಕೆಲಸವಾಗುವುದು. ರೈತರ ಕೆಲಸ ಮಾಡಾಕಾಗೊಲ್ಲ ಅಂದರೆ ಜಾಗ ಖಾಲಿ ಮಾಡಬೇಕು ಎಂದು ಶಾಸಕರ ಎದುರೇ ರೈತರು ಮತ್ತು ಸಾರ್ವಜನಿಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಹಣ ಕೊಟ್ಟು ವರ್ಷ ಕಾದರೂ ನಮಗೆ ಒಂದು ಟಿಸಿ ಕೊಡಲಾಗಿಲ್ಲ. ಅವರು ಹೇಳಿದಂಗೆ ಲಂಚ ಕೊಟ್ರೆ ಒಂದೇ ದಿನದಲ್ಲಿ ಜಮೀನಿಗೆ ಟಿಸಿ ಇಳಿಸ್ತಾರೆ. ಇಲ್ಲ ಅಂದ್ರೆ ನಮ್ಮ ವರ್ಕ್ ಆರ್ಡರ್  ಕ್ಯಾನ್ಸಲ್ ಮಾಡ್ತಾರೆ. ಇವರು ವಂಶಿಕರಲ್ಲ ಬಿಡಿ ಎಂದು ಅವರು ಪಟ್ಟಣದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಬುಧವಾರ ಶಾಸಕ ಸುರೇಶ್‍ಗೌಡ ಅಧ್ಯಕ್ಷತೆಯಲ್ಲಿ ಸೆಸ್ಕ್ ಜನಸಂಪರ್ಕ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಸಭೆಯ ಪ್ರಾರಂಬದಲ್ಲೆ ಕಾಳಿಂಗಲನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್, ಸೆಸ್ಕ್ ಅಧಿಕಾರಿಗಳು 20 ವರ್ಷವಾದರೂ ನಮಗೆ ಒಂದು ಟಿಸಿ(ವಿದ್ಯುತ್ ಪ್ರವರ್ತಕ) ಕೊಟ್ಟಿಲ್ಲ. ಹಣ ಕಟ್ಟಿದ್ದರೂ ಇಂದಿಗೂ ಟಿಸಿ ಮತ್ತು ವಿದ್ಯುತ್ ಸಂಪರ್ಕ ನೀಡಿಲ್ಲ. ಇದೀಗ ನಮಗೆ ಪಾಸ್ ಆಗಿದ್ದ ವರ್ಕ್ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಆರೋಪಿಸಿದರು.

60 ಸಾವಿರ ಕೊಟ್ಟವರಿಗೆ ನಾಳೆಯೇ ಜಮೀನಿನ ಬಳಿ ಟೀಸಿ ಇಳಿಸುತ್ತಾರೆ. ಬಡವರು ಬಂದು ಕೇಳಿದರೆ ಸುಮ್ಮನೆ ತಿಂಗಳುಗಟ್ಟಲೆ ಅಲೆಸುತ್ತಾರೆ. ಟಿಸಿ ಪಡೆಯಲು ಮೊದಲು ಇಂಜಿನೀಯರ್ ಗೆ ಲಂಚ ಕೊಡಬೇಕು, ಲೈನ್ ಮ್ಯಾನ್‍ಗಳಿಗೂ ಕೂಡ ಟಿಸಿ ಇಳಿಸಲು ಮತ್ತು ಎತ್ತಲು ಲಂಚ ನೀಡಬೇಕು. ನಿಜಕ್ಕೂ ರೈತರು ಟಿಸಿ ಪಡೆಯಲು ಎಷ್ಟು ಹಣ ಕೊಡಬೇಕು ಎಂದು ತಿಳಿಸಿ ಎಇಇ ಜಗದೀಶ್ ಅವರ ವಿರುದ್ಧ ಕಿಡಿಕಾರಿದರು.

ಮೈಸೂರು ವಿಭಾಗದ ಸೆಸ್ಕ್ ಎಂಡಿ ಗೋಪಾಲಕೃಷ್ಣ ಮಾತನಾಡಿ, ಮಂಡ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಮಂಡ್ಯದಲ್ಲಿ  6 ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿಸಲಾಗಿದೆ. ಒಂದು ಕೇಂದ್ರಕ್ಕೆ 2 ಎಕರೆಯಂತೆ ಜಾಗದ ಅವಶ್ಯಕತೆಯಿದ್ದು, ಒಂದು ಕೇಂದ್ರ ಸ್ಥಾಪನೆಗೆ ವರ್ಷದ ಸಮಯ ಬೇಕಾಗುತ್ತದೆ. ನಂತರದಲ್ಲಿ ಸಮಸ್ಯಗಳಿಗೆ ಪರಿಹಾರ ಸಿಗಲಿದೆ. ರೈತರ ದೂರುಗಳಿಗೆ ನಾವು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.

ಸಬೆಯಲ್ಲಿ ಜಿ.ಪಂ. ಸದಸ್ಯ ಶಿವಪ್ರಕಾಶ್, ತಹಶೀಲ್ದಾರ್ ರೂಪ, ಎಇಇ ಮರಿಸ್ವಾಮಿ, ಮುಖ್ಯಾಧಿಕಾರಿ ಶಿವಣ್ಣ, ಇಂಜಿನಿಯರ್ ಮಂಜುನಾಥ್, ಎಚ್.ಸಿ.ಚಂದ್ರಶೇಖರ್ ಮುಂತಾದವರು ಇದ್ದರು.

ಅನುಮಾನ ಮೂಡಿಸಿದ ಶಾಸಕರನ ಮೌನ
ಸಭೆಯಲ್ಲಿ ಸೆಸ್ಕ್ ಅಧಿಕಾರಿಗಳ ಲಂಚಾವತಾರದ ಕುರಿತು ರೈತರು ವೇದಿಕೆ ಮುಂಭಾಗಕ್ಕೆ ಬಂದು ಆಕ್ರೋಶ ವ್ಯಕ್ತಪಡಿಸಿದರೂ  ಶಾಸಕ ಸುರೇಶ್‍ಗೌಡ ಮಾತ್ರ ಎಲ್ಲವನ್ನೂ ಗಮನಿಸುತ್ತಾ ಮೌನವಹಿಸಿ ಕುಳಿತಿದ್ದರು.

ಅಧಿಕಾರಿಗಳನ್ನು ಮತ್ತು ರೈತರನ್ನು ಸಣ್ಣ ದ್ವನಿಯಲ್ಲಿ ಸುಮ್ಮನಿರುಸುವ ಪ್ರಯತ್ನ ಮಾಡಿದರೇ ಹೊರತು ಯಾವ ಅಧಿಕಾರಿಗಳಿಗೂ ಸುರೇಶ್‍ಗೌಡ ತಾಕೀತು ಮಾಡಲೇ ಇಲ್ಲ. ಸೆಸ್ಕ್ ನಲ್ಲಿ ಭ್ರಷ್ಟ ಅಧಿಕಾರಿಗಳಿದ್ದಾರೆ ಎಂಬುದು ಗೊತ್ತು. ಅವರ ವಿರುದ್ಧ ಯಾವ ಕ್ರಮವಹಿಸಬೇಕು ಎಂದು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News