ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಬಿಜೆಪಿ ಹುನ್ನಾರ: ಮಾಜಿ ಸಚಿವ ರಾಯರೆಡ್ಡಿ ಆರೋಪ

Update: 2019-07-04 17:34 GMT

ದಾವಣಗೆರೆ, ಜು.4: ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರವನ್ನು ಬಿಜೆಪಿ ನಾಯಕರು ರೂಪಿಸಿದ್ದಾರೆ ಎಂದು ಸತ್ಯಶೋಧನಾ ಸಮಿತಿ ಸಂಚಾಲಕ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದರು. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ವಿಪಕ್ಷವಾಗಿ ಒಳ್ಲೆಯ ಕೆಲಸ ಮಾಡುವ ಬದಲು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂವಿಧಾನದ ಆರ್ಟಿಕಲ್ 356 ಕಾಯ್ದೆ ದುರ್ಬಳಕೆ ಮಾಡಿಕೊಂಡು ರಾಜ್ಯ ವಿಧಾನಸಭೆ ಅಮಾನತ್ತಿನಲ್ಲಿಡುವ ಸಂಚು ನಡೆಸಿದ್ದಾರೆ. ಈ ಮೂಲಕ ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿಗೆ 150 ಸೀಟು ಬರುತ್ತದೆ ಎಂದು ಕೊಂಡಿದ್ದಾರೆ. ಅದರೆ ಅದು ಸಾಧ್ಯವಿಲ್ಲ ಎಂದರು. 

ಎಂಎಲ್‍ಎ ಗಳಿಗೆ ಜವಾಬ್ದಾರಿಗಳಿವೆ: ಕಾನೂನು ರೂಪಿಸುವ ಶಾಸನ ಸಭೆಯ ಸದಸ್ಯರಾಗಿರುವವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಹೊರತು ಮಕ್ಕಳ ರೀತಿ ರಾಜೀನಾಮೆ ಕೊಡುವುದು ಹುಡುಗಾಟಿಕೆಯಲ್ಲ ಎಂದು ಸಲಹೆ ನೀಡಿದರು. 

ರಾಜ್ಯ ಸರ್ಕಾರವನ್ನು ಹೇಗಾದರೂ ಮಾಡಿ ಬೀಳಿಸುವ ಮೂಲಕ ವಾಮ ಮಾರ್ಗದಲ್ಲಿ ರಾಜಕೀಯ ಮಾಡಿ ತುರ್ತು ಸಿಎಂ ಆಗಲು ಯಡಿಯೂರಪ್ಪನವರು ಹೊರಟಿದ್ದಾರೆ. ಬಿಜೆಪಿಯವರು ಹೇಳುವುದು ಒಂದು ನೀತಿ ಮಾಡುವುದು ಅನೀತಿ . ಅವರದು ಮನೆ ಹೊಡೆಯುವ ಕೆಲಸ ಎಂದು ಟೀಕಿಸಿದರು. 

ಪ್ರಧಾನಿ ಮೋದಿ ಅವರ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ದೇಶದ ಪ್ರಮುಖ ಆರ್ಥಿಕ ತಜ್ಞರು ಹಾಗೂ ಆರ್‍ಬಿಐ ಗೌವರ್ನರ್ ಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಪ್ಪು ಆರ್ಥಿಕ ನೀತಿಗಳು ಹೀಗೆ ಮುಂದುವರೆದರೆ ದೇಶ ಆರ್ಥಿಕ ದಿವಾಳಿಯಾದರು ಆಚ್ಚರಿಪಡಬೇಕಿಲ್ಲ ಎಂದರು. 

ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗಾಂಧಿ ಕುಟುಂಬ ಹೊರತು ಪಡಿಸಿದವರನ್ನು ಆಯ್ಕೆ ಮಾಡುವಂತೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹುದ್ದೆಗೆ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಸೂಕ್ತವಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಂಸತ್ತನಲ್ಲಿ ಉತ್ತಮ ಸಂಸದೀಯಪಟುವಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಪಕ್ಷದ ಸಂಘಟನೆ ಈ ಸಮಯದಲ್ಲಿ ಪ್ರಮುಖವಾಗಿದೆ. ಈ ಹಿನ್ನಲೆಯಲ್ಲಿ ಖರ್ಗೆ ಅವರು ಎಐಸಿಸಿ ಹುದ್ದೆಗೆ ಸೂಕ್ತವಾಗಿದ್ದಾರೆ ಎಂದು ಹೇಳಿದರು. 

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶವನ್ನು ಗಳಿಸದಿರಲು ಹಿನ್ನಲೆಯಲ್ಲಿ ಕಾರ್ಯಕರ್ತರು ಮತ್ತು ಜನಾಭಿಪ್ರಾಯ ಸಲುವಾಗಿ ರಾಜ್ಯದ 28 ಜಿಲ್ಲೆಗಳಲ್ಲಿ ಖುದ್ದಾಗಿ ಭೇಟಿಯಾಗಿ ಸೋಲಿನ ಕಾರಣಗಳನ್ನು ಪರಾಮರ್ಶೆ ಮಾಡುತ್ತಿದ್ದೇವೆ. 28 ಜಿಲ್ಲೆಗಳಿಂದ ವರದಿ ತರಿಸಿಕೊಂಡು ಪಕ್ಷವನ್ನು ಮತ್ತೆ ತಳಮಟ್ಟದಿಂದ ಕಟ್ಟಲಿದ್ದೇವೆ ಎಂದರು.  

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ವಿ.ಆರ್.ಸುದರ್ಶನ ಮಾತನಾಡಿ, ಮೈತ್ರಿ ಸರ್ಕಾರ ಬೀಳಿಸಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ದೃಷ್ಠಿಯಿಂದ ಬಿಜೆಪಿ ನಾನಾ ತಂತ್ರಗಾರಿಕೆಗಳನ್ನು ನಡೆಸುತ್ತಿದೆ. ಅದರೆ, ಇದು ಯಶಸ್ವಿಯಾಗಲ್ಲ. ಬಿಜೆಪಿಯವರು ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಅಧಿಕಾರ ಹಿಡಿಯಬೇಕು ಎನ್ನುವ ತಂತ್ರಗಳು ದೇಶಕ್ಕೆ ಮಾರಕ ಎಂದು ಹೇಳಿದರು. 

ಈಗಾಗಲೇ ಬಿಜೆಪಿ 2008 ರಿಂದ 2013 ರವರೆಗೆ ಕೆಟ್ಟ ಆಡಳಿತ ನಡೆಸುವ ಮೂಲಕ ನಗೆಪಾಟಲಿಗೆ ಈಡಾಗಿದೆ . ಈಗ ಮತ್ತೆ ಅಪರೇಷನ್ ಮೂಲಕ ಆಡಳಿತ ನಡೆಸಲು ಹುನ್ನಾರ ನಡೆಸಿದೆ. ಇದು ಸಾಧ್ಯವಿಲ್ಲ. ರಾಜೀನಾಮೆ ಸಲ್ಲಿಸುವ ಶಾಸಕರಿಗೂ ಜವಾಬ್ದಾರಿ ಇರಬೇಕು. 5 ವರ್ಷ ಉತ್ತಮವಾಗಿ ಜನಸೇವೆ ಮಾಡಲಿ ಎಂದು ಜನರು ಆಯ್ಕೆ ಮಾಡಿದ್ದಾರೆ. ಅದನ್ನು ಮರೆತು ರಾಜೀನಾಮೆಯಂತಹ ಅವಘಡಗಳನ್ನ ಮಾಡಬಾರದು ಎಂದರು. 

ಈಗಾಗಲೇ ಉತ್ತರ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿನ ಕುರಿತು ಕಾರ್ಯಕರ್ತರಿಂದ ಅಭಿಪ್ರಾಯ ಪಡೆಯಲಾಗಿದೆ. 2 ನೇ ಹಂತದಲ್ಲಿ ದಾವಣಗೆರೆ–ಚಿತ್ರದುರ್ಗದಲ್ಲಿ ಸಭೆ ನಡೆಸುತ್ತವೆ. ಸೆಪ್ಟಂಬರ್ ನಲ್ಲಿ ಅಂತಿಮ ವರದಿಯನ್ನು ಕೆಪಿಸಿಸಿಗೆ ಸಲ್ಲಿಸುತ್ತವೆ. ಜೊತೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವ ಕಾರ್ಯವನ್ನು ಮಾಡಲಿದ್ದೇವೆ ಎಂದು ತಿಳಿಸಿದರು. 

ಪ್ರಸ್ತುತ ಕೇಂದ್ರ ಸರಕಾರ ಬಜೆಟ್ ಮಂಡಿಸಲಿದ್ದು, ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಹಣಕಾಸು ಮಂತ್ರಿಯಾಗಿರುವ ನಿರ್ಮಲಾ ಸೀತರಾಮನ್ ಅವರು ಕರ್ನಾಟಕದ ಹಿತದೃಷ್ಠಿಯನ್ನು ಕಡೆಗಣಿಸಬಾರದು. ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿಸುವಂತ ಯೋಜನೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ. ಅಲ್ಲದೇ ಅಭಿವೃದ್ದಿ ಮರೆತು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದಿದೆ ಎಂದರು.  

ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಂಸದ ಧೃವನಾರಾಯಣ್, ಕಾಂಗ್ರೆಸ್ ಮುಖಂಡ ಹೆಚ್.ಬಿ.ಮಂಜಪ್ಪ, ರೇಷ್ಮ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News