ಕೊಡಗಿನಲ್ಲಿ ಆರ್ದ್ರಾ ಮಳೆ ಚುರುಕು

Update: 2019-07-04 17:44 GMT

ಮಡಿಕೇರಿ ಜು.4: ಕೊಡಗಿನ ಬಹುತೇಕ ಕಡೆಗಳಲ್ಲಿ ಗುರುವಾರ ಮಧ್ಯಾಹ್ನದ ನಂತರ ನಿರಂತರವಾಗಿ ಮಳೆಯಾಗಿದ್ದು, ಆರ್ದ್ರಾ ಮಳೆ ಚುರುಕುಗೊಂಡಿದೆ.

ಬೆಳಗ್ಗಿನಿಂದಲೆ ಮಡಿಕೇರಿ ವ್ಯಾಪ್ತಿಯಲ್ಲಿ ದಟ್ಟ ಮಂಜು, ಆಗೊಮ್ಮೆ ಈಗೊಮ್ಮೆ ಸುರಿಯುತ್ತಿದ್ದ ಮಳೆ ಮುಂಗಾರು ಚೇತರಿಸಿಕೊಳ್ಳುತ್ತಿರುವ ಸೂಚನೆಯನ್ನು ನೀಡಿದೆ. ಮಧ್ಯಾಹ್ನದ ಬಳಿಕ ನಿರಂತರವಾಗಿ ಸಂಜೆಯವರೆಗೆ ಹದವಾಗಿ ಮಳೆ ಸುರಿಯಿತು.

ಕಳೆದ ಸಾಲಿನಲ್ಲಿ ಇದೇ ಅವಧಿಗೆ 53.48 ಇಂಚು ಸರಾಸರಿ ಮಳೆ ಜಿಲ್ಲೆಯಲ್ಲಿ ಆಗಿತ್ತು. ಪ್ರಸಕ್ತ ಸಾಲಿನಲ್ಲಿ ಕೇವಲ 17.76 ಇಂಚು ಮಳೆಯಾಗಿದೆ. ಇಂತಹ ಪರಿಸ್ಥಿತಿಯ ನಡುವೆ ಇಂದು ಸುರಿದ ಮಳೆ ಒಂದಷ್ಟು ನೆಮ್ಮದಿಯನ್ನು ಜಿಲ್ಲೆಯ ರೈತಾಪಿ ವರ್ಗದಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿಸಿದೆ. 

ಕಾವೇರಿಯ ಉಗಮ ಸ್ಥಾನವಾದ ಭಾಗಮಂಡಲ, ತಲಕಾವೇರಿ ವಿಭಾಗಗಳಲ್ಲು ಇಲ್ಲಿಯವರೆಗೆ ಅಲ್ಪಸ್ವಲ್ಪ ಮಳೆಯಾಗಿದೆಯೇ ಹೊರತು, ವರ್ಷಂಪ್ರತಿ ಸುರಿಯುವ ಭಾರೀ ಮಳೆ ಕಂಡು ಬಂದಿಲ್ಲ. ಇದೇ ಪರಿಸ್ಥಿತಿ ಜಿಲ್ಲೆಯ ಕಾವೇರಿ ನದಿ ತಟದ ಎಲ್ಲಾ ಪ್ರದೇಶಗಳಲ್ಲು ಕಂಡು ಬಂದಿದ್ದು, ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಜಿಲ್ಲೆಯ ಇತರೆ ಭಾಗಗಳಿಗಿಂತ ಒಂದಷ್ಟು ಉತ್ತಮ ಮಳೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News