ವೀರಾಜಪೇಟೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿಗಾಗಿ ಪರದಾಟ: ಹೆಚ್ಚುವರಿ ಕೇಂದ್ರ ಸ್ಥಾಪನೆಗೆ ಆಗ್ರಹ

Update: 2019-07-05 11:37 GMT

ಮಡಿಕೇರಿ, ಜು.5 : ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಸಾರ್ವಜನಿಕರು ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಗಾಗಿ ಪರದಾಡುವಂತಾಗಿದೆ ಎಂದು ವೀರಾಜಪೇಟೆ ಪಟ್ಟಣ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಹೆಚ್ಚುವರಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟ್ಟಣ ಪಂಚಾಯತ್ ಸದಸ್ಯರು ಅರ್ಜಿದಾರರ ಪರದಾಟವನ್ನು ವಿವರಿಸಿದರು. 

ಸದಸ್ಯ ಡಿ.ರಾಜೇಶ್ ಪದ್ಮನಾಭ ಮಾತನಾಡಿ, ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಪ್ರತಿನಿತ್ಯ ಆಧಾರ್ ಕಾರ್ಡ್‍ಗೆ 15 ಹಾಗೂ ಪಡಿತರ ಚೀಟಿಗೆ 25 ಮಂದಿಗೆ ಮಾತ್ರ ಟೋಕನ್ ನೀಡಲಾಗುತ್ತಿದೆ. ಆದರೆ ವೀರಾಜಪೇಟೆ ತಾಲೂಕಿನಾದ್ಯಂತ ಆರು ಹೋಬಳಿಗಳಿದ್ದು, ಸುಮಾರು 2 ಲಕ್ಷ ಜನಸಂಖ್ಯೆ ಇದೆ. ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ ಕೇವಲ ಒಂದೇ ಆಧಾರ್ ನೋಂದಣಿ ಕೇಂದ್ರವಿರುವುದರಿಂದ ದಿನಗೂಲಿ ನೌಕರರು, ಕಾರ್ಮಿಕರು, ರೈತರು, ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಆಧಾರ್ ಕಾರ್ಡ್‍ಗಾಗಿ ಅಲೆಯವಂತಾಗಿದೆ ಎಂದು ದೂರಿದರು.

ಪ್ರಸಕ್ತ ಸರಕಾರದ ಯಾವುದೇ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ತಾಲೂಕು ಕಚೇರಿಯಲ್ಲಿ ಮಧ್ಯಾಹ್ನದವರೆಗೆ ಮಾತ್ರ ನಡೆಯುತ್ತಿರುವ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ದಿನವಿಡೀ ಮುಂದುವರಿಸಬೇಕು. ಅಲ್ಲದೆ ತಾಲೂಕು ಕೇಂದ್ರದಲ್ಲಿ ಕನಿಷ್ಟ ಇನ್ನು ಎರಡು ಕೇಂದ್ರಗಳನ್ನು ಆರಂಭಿಸುವಂತಾಗಬೇಕು ಎಂದು ಒತ್ತಾಯಿಸಿದರು.

ವೀರಾಜಪೇಟೆ ಅಂಚೆಕಚೇರಿಯಲ್ಲಿ ಆಧಾರ್ ನೋಂದಣಿ ಕೇಂದ್ರವಿದ್ದರೂ, ಪ್ರತೀದಿನ ಕೇವಲ 7 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅವರಲ್ಲೂ ಕೆಲವರು ಆ ದಿನ ನೋಂದಣಿ ನಡೆಯದೆ ವಾಪಾಸಾಗುವಂತಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಪಡಿತರ ಚೀಟಿಗಾಗಿಯೂ ಸಾರ್ವಜನಿಕರು ಪ್ರತಿನಿತ್ಯ ಕಚೇರಿಗೆ ಅಲೆಯುವಂತಾಗಿದ್ದು, ಬೆರಳಚ್ಚು ಪಡೆಯುವ ಅಧಿಕಾರಿ ಕಚೇರಿಯಲ್ಲಿರುವುದಕ್ಕಿಂತ ಹೆಚ್ಚಿನ ಸಮಯ ಖಾಸಗಿ ನೋಂದಣಿ ಕೇಂದ್ರದಲ್ಲೇ ಇರುವುದರಿಂದ ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಖಾಸಗಿ ಕೇಂದ್ರಕ್ಕೆ ಮುಗಿಬೀಳುವಂತಾಗಿದೆ ಎಂದೂ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ರಜನೀಕಾಂತ್, ಅಗಸ್ಟಿನ್ ಬೆನ್ನಿ, ಮಹಮ್ಮದ್ ರಾಫಿ ಹಾಗೂ ಅಬ್ದುಲ್ ಜಲೀಲ್  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News