×
Ad

ಕೇಂದ್ರ ಬಜೆಟ್: ರಾಜ್ಯ ರಾಜಕೀಯ ನಾಯಕರು, ಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ...

Update: 2019-07-05 19:13 IST

ಬೆಂಗಳೂರು, ಜು.5: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಇಂದು 2019-20 ರ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ಬಜೆಟ್ ಬಗ್ಗೆ ರಾಜ್ಯದ ರಾಜಕಿಯ ನಾಯಕರು, ವಿವಿಧ ಸಂಘ ಸಂಸ್ಥೆಗಳ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ.

'ಯಾವುದೇ ನಿರ್ದಿಷ್ಟ ದಾರಿ ಇಲ್ಲದ ಬಜೆಟ್ ಇದು. ಅಧಿಕಾರಿಗಳು ಸರಿಯಾಗಿ ಸಲಹೆ ಮಾಡಿಲ್ಲ. ಪ್ರಧಾನಿ ಮೋದಿಯವರೂ ಮಾರ್ಗದರ್ಶನ ಮಾಡಿಲ್ಲ. ರಾಜ್ಯದ ನಮ್ಮ ನಿರೀಕ್ಷೆ ಸಂಪೂರ್ಣ ಹುಸಿ ಮಾಡಿದೆ. ಯಾವುದೇ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡದ ಬಜೆಟ್ ಇದು’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

‘ಯಾವುದೇ ನಿರ್ದಿಷ್ಟ ಗುರಿಯಿಲ್ಲದ ನೀರಸ ಬಜೆಟ್ ಇದು. ಆರ್ಥಿಕ ಪುನಶ್ಚೇತನ, ಉದ್ಯೋಗ ಸೃಷ್ಟಿ, ರೈತರ ಆದಾಯ ಹೆಚ್ಚಳ, ಗ್ರಾಮೀಣಾಭಿವೃದ್ಧಿಗೆ ಯಾವುದೇ ಸ್ಪಷ್ಟ ಯೋಜನೆಗಳಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರದ ಕಡೆಗಣನೆ, ಜಲ ಸಂರಕ್ಷಣೆ, ಪರಿಸರ ರಕ್ಷಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಬರೆ ಏಳೆದಂತೆ ಆಗಿದೆ’

-ದಿನೇಶ್‌ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಬಂಡವಾಳ ವ್ಯವಸ್ಥೆಗೆ ಪೂರಕ ಬಜೆಟ್

2019-20ನೆ ಸಾಲಿನ ಬಜೆಟ್ ಬಂಡವಾಳಶಾಹಿ ವ್ಯವಸ್ಥೆಗೆ ಪೂರಕವಾಗಿದೆ. ಉದ್ಯಮಪತಿಗಳಿಗೆ ಸಹಕಾರ ನೀಡುವ ಬಜೆಟ್ ಇದಾಗಿದ್ದು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರಿಗೆ ನಿರಾಶೆ ಮೂಡಿಸಿದೆ. ಬಜೆಟ್‌ನ ನೂನ್ಯತೆಗಳ ಬಗ್ಗೆ ಕಾಂಗ್ರೆಸ್ ಸಂಸದರು ಹೋರಾಟಕ್ಕೆ ಸಿದ್ಧರಾಗಬೇಕು. ಕೇಂದ್ರದ ಬಿಜೆಪಿ ಸರಕಾರ ಹಿಂದಿನಿಂದಲೂ ಕರ್ನಾಟಕಕ್ಕೆ ಅನ್ಯಾಯ ಮಾಡಿಕೊಂಡೇ ಬಂದಿದೆ. ರಾಜ್ಯಕ್ಕೆ ನೀಡಬೇಕಾದ ಅನುದಾನದ ವಿಚಾರದಲ್ಲೂ ತಾರತಮ್ಯ ಮಾಡಿರುವುದು ಬಜೆಟ್‌ನಲ್ಲಿ ಕಾಣಬಹುದಾಗಿದೆ.

-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಬಜೆಟ್ ನಿರಾಸೆ ಮೂಡಿಸಿದೆ

ನರೇಂದ್ರ ಮೋದಿ ಹೆಸರಿನಲ್ಲಿ ಮತ ಹಾಕಿದ ದೇಶದ ಜನತೆಗೆ ಕೇಂದ್ರದ ಬಜೆಟ್ ನಿರಾಸೆ ಮೂಡಿಸಿದೆ. ಬರ-ಪ್ರವಾಹದ ನಡುವೆ ದೇಶದ ಜನರಿಗೆ ಭರವಸೆ ಮೂಡಿಸಬೇಕಿತ್ತು. ಆದರೆ, ಅಂತಹ ಯಾವ ಭರವಸೆ ಮೂಡಿಸುವ ಕೆಲಸ ಬಜೆಟ್‌ನಲ್ಲಿ ಆಗಿಲ್ಲ. ಬಜೆಟ್‌ನಲ್ಲಿ ಹಳೆಯದನ್ನೇ ತಿರುಗಿಸಿ ಹೇಳಲಾಗಿದೆ. ಮುದ್ರಾ ಯೋಜನೆಯಲ್ಲಿ 3ಲಕ್ಷ ರೂ. ಸಾಲಕೊಡುವುದು ಹೊಸ ಯೋಜನೆಯಲ್ಲ. ರಸ್ತೆ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಆ ಇಲಾಖೆಗೆ ಹಣ ಕೊಟ್ಟಿಲ್ಲ. ಮನೆಗಳ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ. ಆದರೆ, ವಸತಿ ಇಲಾಖೆಗೆ ಹಣ ಕೊಟ್ಟಿಲ್ಲ. ಯುವಕರನ್ನು ಬಜೆಟ್‌ನಲ್ಲಿ ಮರೆತು ಬಿಟ್ಟಿದ್ದಾರೆ. ರೈತರ ನೆರವಿಗೆ ಬರಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

-ಡಿ.ಕೆ.ಸುರೇಶ್, ಸಂಸದ

ಘೋಷಣೆಗೆ ಸೀಮಿತ ಬಜೆಟ್

ಘೋಷಣೆಗಳಿಗೆ ಸೀಮಿತ ಬಜೆಟ್ ಎಂದೇಳಬಹುದಷ್ಟೆ. ಹೊಸ ಬಾಟಲಿಗೆ ಹಳೇ ವೈನ್ ಸುರಿದಂತಿದೆ. ಕೃಷಿ ವಿಷಯದಲ್ಲಿ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಏನನ್ನೂ ಹೇಳಿಲ್ಲ. 45ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಇದೆ. ವಿದೇಶಿ ಕಂಪನಿಗಳು ಭಾರತಕ್ಕೆ ಬರುವ ರೀತಿಯಲ್ಲಿ ಕಾರ್ಪೊರೇಟ್ ತೆರಿಗೆ ಹಾಕಿಲ್ಲ. ಕಾರ್ಪೊರೇಟ್ ತೆರಿಗೆ ಬಗ್ಗೆ ನನಗೆ ಸಮಾಧಾನವಿಲ್ಲ. ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.

-ಪ್ರಜ್ವಲ್ ರೇವಣ್ಣ , ಸಂಸದ

ರಿಯಲ್ ಎಸ್ಟೇಟ್ ವರ್ಧನೆಗೆ ಬಜೆಟ್ ಸಹಕಾರಿಯಾಗಿದೆ

ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ ಶಕ್ತಿಶಾಲಿಯಾದ ಸುಧಾರಣಾ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಕೈಗೆಟುಕುವ ದರದಲ್ಲಿ ವಸತಿ ನೀಡುವುದು ತಕ್ಷಣದ ಆದ್ಯತೆಯಾಗಿಸಿಕೊಂಡಿದೆ. ಇದು ರಿಯಲ್ ಎಸ್ಟೇಟ್ ವರ್ಧನೆಗೆ ಬಜೆಟ್ ಸಹಕಾರಿಯಾಗಲಿದೆ. ಗ್ರಾಮಾಂತರ ಮತ್ತು ನಗರ ಪ್ರದೇಶಗಳ ವಸತಿ ಗುರಿಯನ್ನು ಸಾಧಿಸಲು ಬದ್ಧತೆ ತೋರಿರುವುದು ಒಂದು ಹೃದಯಸ್ಪರ್ಶಿ ನಿಲುವಾಗಿದೆ. ವಸತಿ(ಗೃಹ) ಸಾಲದ ಬಡ್ಡಿಯ ಮೇಲೆ 1,50,000 ಲಕ್ಷ ರೂ.ವರೆಗಿನ ಆದಾಯದಲ್ಲಿ ಹೆಚ್ಚುವರಿ ತೆರಿಗೆಯನ್ನು ಕಡಿತ ಮಾಡುವ ಪ್ರಸ್ತಾವನೆ ಮಾಡಲಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಕ್ಷೇತ್ರದ ರೀಟೇಲ್ ಇಂಟರೆಸ್ಟ್ ಖಂಡಿತವಾಗಿಯೂ ಮೇಲ್ಮಟ್ಟಕ್ಕೆ ಹೋಗುತ್ತದೆ.

-ನೇಸರ ಬಿ.ಎಸ್., ಕಾರ್ಯಕಾರಿ ನಿರ್ದೇಶಕ, ಕಾನ್‌ಕರ್ಡ್ ಗ್ರೂಪ್

ಅಪಾಯಕಾರಿ ಅಜೆಂಡಾ

ಬ್ಯಾಂಕ್‌ಗಳ ಪುನಶ್ಚೇತನಕ್ಕಾಗಿ 70 ಸಾವಿರ ಕೋಟಿ ರೂ.ಗಳ ಅನುದಾನ ನೀಡಲು ಮೋದಿ ಸರಕಾರ ತನ್ನ ಬಜೆಟ್‌ನಲ್ಲಿ ಘೋಷಿಸಿದೆ. ಬ್ಯಾಂಕ್‌ಗಳು ನಷ್ಟದಲ್ಲಿವೆ ಎಂದರೆ ಬಾಗಿಲು ಮುಚ್ಚಿಕೊಳ್ಳಲಿ. ನಷ್ಟಕ್ಕೆ ಕಾರಣ ಅವುಗಳ ವ್ಯವಹಾರವೇ ಹೊರತು ದೇಶದ ಜನರಲ್ಲ. ಅವುಗಳ ಪುನಶ್ಚೇತನಕ್ಕೆ ದೇಶದ ಜನರ ತೆರಿಗೆ ಹಣವನ್ನು ವಿನಿಯೋಗಿಸುವುದು ಅಪಾಯಕಾರಿ ಬೆಳವಣಿಗೆ. ಇನ್ನು ಕಾರ್ಮಿಕ ಕಾನೂನನ್ನು ಮರುವಿನ್ಯಾಸಗೊಳಿಸುವುದರ ಹಿಂದೆ ಕಾರ್ಮಿಕರ ಶಕ್ತಿಯನ್ನು ದುರ್ಬಲಗೊಳಿಸುವ ಹುನ್ನಾರವಡಗಿದೆ. ಖಾಸಗಿ ಉದ್ಯಮಪತಿಗಳಿಗೆ ಅನುಕೂಲ ಮಾಡಿಕೊಡುವ ಬಿಜೆಪಿಯ ಅಜೆಂಡಾ ಎದ್ದು ಕಾಣುತ್ತಿದೆ. ಹಾಗೆಯೇ ಏರ್ ಇಂಡಿಯಾವನ್ನು ಕೂಡ ಖಾಸಗಿಯವರಿಗೆ ವಹಿಸಿಕೊಡುವ ಮೂಲಕ ಸಾರ್ವಜನಿಕ ವಲಯದ ಉದ್ದಿಮೆಗಳ ಕತ್ತು ಹಿಸುಕುವ ಕಾರ್ಯ ಮೋದಿ ಸರಕಾರದಿಂದ ವ್ಯವಸ್ಥಿತವಾಗಿ ಮುಂದುವರೆದಿದೆ.

-ಎನ್.ಎಸ್.ಶಂಕರ್, ಚಿತ್ರನಿರ್ದೇಶಕ, ಹಿರಿಯ ಪತ್ರಕರ್ತ

ಸಾರಿಗೆ ಕ್ಷೇತ್ರಕ್ಕೆ ಹೊರೆ

ಕೇಂದ್ರ ಸರಕಾರದ ಹೊಸ ಆಯವ್ಯಯದಲ್ಲಿ ರಸ್ತೆ ಶುಲ್ಕ, ಟೋಲ್ ಚಾರ್ಜ್‌ಗಳಲ್ಲಿ ಬದಲಾವಣೆ ಮಾಡದೆ ಇಂಧನದ ಮೇಲೆ ಒಂದು ರೂಪಾಯಿ ಸೆಸ್ ವಿಧಿಸಿರುವುದು ಸಾರಿಗೆ ಕ್ಷೇತ್ರಕ್ಕೆ ದೊಡ್ಡ ಹೊರೆಯಾಗುತ್ತದೆ. ವಿದ್ಯುತ್ ಚಾಲಿತ ವಾಹನಗಳಿಗೆ ತೆರಿಗೆ ವಿನಾಯಿತಿ ಕೊಟ್ಟಿರುವುದು ಪ್ರೋತ್ಸಾಹದಾಯಕವಾಗಿದೆ. ಕೇಂದ್ರ ಸರಕಾರದ ಆಯವ್ಯಯದಲ್ಲಿ ಇಂಧನವನ್ನು ಜಿಎಸ್‌ಟಿಗೆ ತರುತ್ತಾರೆ ಎಂಬ ಆಸೆ ಹುಸಿಯಾಗಿದೆ. ಸಾಂಪ್ರದಾಯಿಕ ವ್ಯಾಪಾರ ಮಾಡುವ ಸಂಸ್ಥೆಗಳಿಗೆ ಯಾವುದೇ ರೀತಿಯ ಆರ್ಥಿಕ ಭರವಸೆ ಸಿಗಲಿಲ್ಲ.

-ಕೆ.ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘ

ಉದ್ಯೋಗ ಭದ್ರತೆ ನೀಡಿಲ್ಲ

ಯುವಶಕ್ತಿ ದೇಶದ ಶಕ್ತಿ ಎನ್ನುವ ಸರಕಾರವು ಯುವಜನರ ಸಮಗ್ರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಯಾವುದೇ ಪರಿಣಾಮಕಾರಿಯಾದ ಯೋಜನೆ ಪ್ರಕಟಿಸಿಲ್ಲ. ಯುವಜನರಿಗೆ ಉದ್ಯೋಗ ಸೃಷ್ಟಿಸುವ ಯಾವುದೇ ಅವಕಾಶಗಳು ಬಜೆಟ್‌ನಲ್ಲಿಲ್ಲ. ದೇಶದ ಕೃಷಿ ವ್ಯವಸ್ಥೆಯನ್ನು ಸುಧಾರಿಸಿ ಸ್ಥಳೀಯವಾಗಿ ಯುವಜನರು ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ರೂಪಿಸಬಹುದಿತ್ತು. ಕೇಂದ್ರದಲ್ಲಿ ಯುವಜನ ಆಯೋಗ ಸ್ಥಾಪನೆ ಮಾಡಿ ಆ ಮೂಲಕ ಯುವಜನರಿಗೆ ಇರುವ ಸಮಸ್ಯಗಳು ಸವಾಲುಗಳನ್ನು ಬಗೆಹರಿಸಬಹುದಿತ್ತು. ಆದರೆ, ಅದನ್ನು ಮಾಡಲು ಮುಂದಾಗಿಲ್ಲ. ಯುವಜನರಿಗೆ ಉದ್ಯೋಗ ಭದ್ರತೆಯನ್ನು ನೀಡುವಲ್ಲಿ ಬಿಜೆಪಿ ಜಾಣ ಮರೆವು ಪ್ರದರ್ಶಿಸಿದೆ.

-ಶಶಿರಾಜ್ ಹರತಲೆ, ಯುವಜನ ಕಾರ್ಯಕರ್ತ

ಜನಸಾಮಾನ್ಯರ ಬಜೆಟ್ ಆಗಿದೆ. ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಮೂಲಭೂತ ಸೌಕರ್ಯ ನೀಡುವುದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸಿದ್ದಾರೆ.

-ಸುರೇಶ್ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

ದೇಶದ ಇತಿಹಾಸಲ್ಲೇ ಒಳ್ಳೆಯ ಬಜೆಟ್ ಇದಾಗಿದೆ. ಬಸವಣ್ಣನವರ ತತ್ವಗಳ ಆಧಾರದ ಬಜೆಟ್ ಇದು. ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ.

-ಉಮೇಶ್ ಜಾಧವ್, ಸಂಸದ

ಕೇಂದ್ರ ಬಜೆಟ್ ರೈತ, ಕಾರ್ಮಿಕ ಹಾಗೂ ಸಾಮಾನ್ಯ ಜನರ ವಿರೋಧಿಯಾಗಿದೆ. ಪೆಟ್ರೋಲ್ ಸೆಸ್ ಏರಿಕೆ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ. ಏನು ಮಾಡಿದರೂ ನಡೆಯುತ್ತದೆ ಎನ್ನುವ ಧೋರಣೆಯಾಗಿದೆ. ರೈತರ ಸಾಲ ಮನ್ನಾ, ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿಲ್ಲ.

-ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ನಿರ್ಮಲಾ ಸುಮಾರು ಎರಡೂವರೆ ಗಂಟೆ ಬಜೆಟ್ ಮಂಡನೆ ಮಾಡಿದ್ದಾರೆ. ಎಲ್ಲೂ ನಿಲ್ಲಿಸಲಿಲ್ಲ, ನೀರನ್ನೂ ಕುಡಿಯಲಿಲ್ಲ. ಸ್ವಲ್ಪವೂ ಸುಸ್ತಾಗಲಿಲ್ಲ. ಇದು ಮಹಿಳೆಯರ ಶಕ್ತಿಯನ್ನು ತೋರಿಸುತ್ತದೆ.

-ಶೋಭಾ ಕರಂದ್ಲಾಜೆ, ಸಂಸದೆ

ಕನ್ನಡ ಭಾಷೆ ಸೇರಿದಂತೆ ಇತರೆ 13 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ. ಪ್ರಾದೇಶಿಕ ಬ್ಯಾಂಕುಗಳ ನೇಮಕಾತಿಗೆ ಐಬಿಪಿಎಸ್ ನಡೆಸುವ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿಗೂ ಬರೆಯಲು ಅವಕಾಶ ನೀಡಬೇಕು.

-ವ.ಚ.ಚನ್ನೇಗೌಡ, ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಜಿಡಿಪಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕಾದಷ್ಟು ನೀಡಿಲ್ಲ ಹಾಗೂ ಕೇಂದ್ರ ಬಜೆಟ್‌ನಲ್ಲಿ ಶೇ.3ಕ್ಕಿಂತ ಅಧಿಕ ಮಾಡಿಲ್ಲ. ಮೋದಿ ಸರಕಾರವು ಎರಡನೆ ಅವಧಿಗೆ ಆಯ್ಕೆಗೊಂಡ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಹಾತೊರೆಯುತ್ತಿದ್ದಾರೆ. ಶಿಕ್ಷಣವನ್ನು ಖಾಸಗೀಕರಣ, ಕೋಮುವಾದೀಕರಣಕ್ಕೆ ಪೂರಕವಾದ ರೀತಿಯಲ್ಲಿ ಬಜೆಟ್ ಮಂಡಿಸಲಾಗಿದೆ.

-ಗುರುರಾಜ್ ದೇಸಾಯಿ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ

ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಗ್ರಾಮೀಣ ಭಾರತವನ್ನು ಕಡೆಗಣಿಸಿದೆ. ರೈತರ ಬಗ್ಗೆ ಕೇವಲ ಬಾಯಿ ಮಾತಿನ ಪ್ರೀತಿಯನ್ನು ತೋರಿಸುತ್ತಾ, ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ. ರೈತರ ಅಭಿವೃದ್ಧಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದಾರೆಯೇ ಹೊರತು ಅದಕ್ಕೆ ಏನು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲವಿದೆ, ಪದೇ ಪದೇ ಬರಗಾಲ ಬರುವ ರಾಜ್ಯಗಳಿದ್ದು, ಅದನ್ನು ನಿಭಾಯಿಸಲು ಏನು ಕಾರ್ಯಕ್ರಮ ರೂಪಿಸಿಲ್ಲ.

-ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘದ ಅಧ್ಯಕ್ಷ

ರೈತರ ಆದಾಯವನ್ನು 2022ಕ್ಕೆ ದ್ವಿಗುಣಗೊಳಿಸುವ ಭರವಸೆ ನೀಡಿರುವ ಕೇಂದ್ರ ಸರಕಾರ ಈ ದಿಕ್ಕಿನಲ್ಲಿ ಯಾವುದೇ ಯೋಜನೆ ಪ್ರಕಟಿಸಿಲ್ಲ. ಬರ-ಪ್ರವಾಹ ರೈತರನ್ನು ಕಾಡುತ್ತಿದ್ದು ಕೃಷಿ ದುರ್ಬಲವಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ರೈತರ ಅಭಿವೃದ್ಧಿಗೆ ಬೇಕಾದ ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಶೋಷಣೆ ಇಲ್ಲದ ಮಾರುಕಟ್ಟೆ ಕಲ್ಪಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಪ್ರಧಾನಿ ಫಸಲ್ ಭೀಮಾ ಯೋಜನೆಯನ್ನು ತಿದ್ದುಪಡಿ ಮಾಡಿ ಹೆಚ್ಚು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದಾಗಲಿ, ಕೃಷಿ ಸಾಲ ನೀತಿ ಬದಲಾಯಿಸಿ ರೈತನ ಅಗತ್ಯಕ್ಕೆ ಜಮೀನು ಮೌಲ್ಯಕ್ಕೆ ಅನುಗುಣವಾಗಿ ಬೇಕಾದಷ್ಟು ಸಾಲ ಕೊಡುವಂತ ವ್ಯವಸ್ಥೆಯಾಗಲಿ ಜಾರಿಗೆ ತರುವ ಬಗ್ಗೆ ಅಥವಾ ಹಳ್ಳಿಗಳ ಯುವಕರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಯೋಜನೆಗಳಾಗಲಿ ಬಜೆಟ್‌ನಲ್ಲಿ ಮಂಡನೆಯಾಗಿಲ್ಲ.

-ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

ಮೋಸದ ಮುಂಗಡ ಪತ್ರ

ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ನೀರಸ, ಮರೆ ಮೋಸದ ಮುಂಗಡಪತ್ರವಾಗಿದೆ. ಈ ಹಿಂದೆ ಕಳೆದ ಐದು ವರ್ಷಗಳಲ್ಲಿ ನಾಲ್ವರು ಆರ್ಥಿಕ ತಜ್ಞರು, ಇಬ್ಬರು ಆರ್‌ಬಿಐ ನಿರ್ದೇಶಕರು ಅವಧಿಗಿಂತ ಮೊದಲೆ ರಾಜೀನಾಮೆ ಸಲ್ಲಿಸಿ ಇವರ ಸಹವಾಸನೆ ಬೇಡ ಅಂತ ಹೊರ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಸರಕಾರ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಈ ಮುಂಗಡ ಪತ್ರದಲ್ಲಿ ಅದು ನೀಡಿದ ವಿತ್ತೀಯ ಕೊರತೆ, ಎನ್‌ಪಿಎ, ಜಿಡಿಪಿ ಕುರಿತಾದ ಅಂಕಿಅಂಶಗಳ ಬಗ್ಗೆ ಯಾರಿಗೂ ನಂಬಿಕೆ ಇಲ್ಲ.

ತೈಲ, ಮನೆ ಕಟ್ಟಲು ಬೇಕಾದ ಉಕ್ಕು ಟೈಲ್ಸ್, ಚರ್ಮ, ಇತ್ಯಾದಿ ದುಬಾರಿ ಆಗಲಿವೆ. ರಿಟೇಲ್, ಮಾದ್ಯಮ, ವಿಮಾ ವಲಯದಲ್ಲಿ ಮುಕ್ತ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡಲಾಗಿದೆ. ಇದು ನವ ಉದಾರೀಕರಣದ ಮುಂದುವರಿಕೆ. ಇದನ್ನು ವಿರೋದಿಸುವ ತ್ರಾಣವು ಯಾರಿಗೂ ಇಲ್ಲ. ಉದ್ಯೋಗ ಮತ್ತು ಯುವಜನರು ಕುರಿತು ಯಾವುದೇ ಯೋಜನೆಗಳಿಲ್ಲ, ಭರವಸೆಗಳಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಸಂಶೊಧನಾ ಪ್ರತಿಷ್ಠಾನ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದು ಶಿಕ್ಷಣದ ಕೇಂದ್ರೀಕರಣ ಪ್ರಕ್ರಿಯೆಯಾಗಿದೆ. ಕಳೆದ ಐದು ವರ್ಷಗಳಲ್ಲಿ 7 ಐಐಟಿ, 7 ಐಐಎಂ, 15 ಎಐಐಎಂಎಸ್‌ಗಳನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಯಾವುದೂ ಕಾರ್ಯಗತವಾಗಿಲ್ಲ. ಈ ಬಾರಿ ವಿಶ್ವ ದರ್ಜೆ ಉನ್ನತ ಶಿಕ್ಷಣ ಸಂಸ್ಥೆಗಳಿಗಾಗಿ 400 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಇದು ಗಾಳಿ ಮಾತಾಗಿ ಉಳಿಯುತ್ತದೆ. ಶಿಕ್ಷಣದ ಕುರಿತಾಗಿ ಯಾವುದೇ ಕಾರ್ಯಯೋಜನೆಗಳಿಲ್ಲದ ನಿಷ್ಪ್ರಯೋಜಕ ಬಜೆಟ್ ಇದಾಗಿದೆ.

-ಶ್ರೀಪಾದ ಭಟ್, ಸಮಾನ ಶಿಕ್ಷಣ ಜನಾಂದೋಲನದ ಸಂಚಾಲಕ

ಸಣ್ಣ ಕೈಗಾರಿಕೋದ್ಯಮಕ್ಕೆ ಹೊಸ ಚೈತನ್ಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಪ್ರೋತ್ಸಾಹ ನೀಡಿ ಕೈಗಾರಿಕೆಗಳ ಆರ್ಥಿಕಾಭಿವೃದ್ದಿಗೆ ಆದ್ಯತೆ ನೀಡಿ ನಿರುದ್ಯೋಗ ಸಮಸ್ಯೆಗೆ ನವೋದ್ಯಮಗಳಿಗೆ (ಸ್ಟಾರ್ಟ್‌ಅಪ್ಸ್) ಅನುಕೂಲವಾಗಲಿದೆ. ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗಳ ಬೆಳವಣಿಗೆಯ ದೃಷ್ಟಿಯಿಂದ ಒಂದು ಕೋಟಿ ರೂ. ಸಾಲದ ಒಟ್ಟು ಬಡ್ಡಿಯ ಮೇಲೆ ಶೇ.2 ರಷ್ಟು ಬಡ್ಡಿ ದರದಲ್ಲಿ ವಿನಾಯಿತಿ ನೀಡಿರುವುದು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವದಡಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 10 ಲಕ್ಷ ಯುವಕರಿಗೆ ತರಬೇತಿ ನೀಡುವುದು. ಮುಂದಿನ 5 ವರ್ಷಗಳಲ್ಲಿ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿರುವ ಎನ್‌ಡಿಎ ಸರಕಾರದ ಪ್ರಮುಖ ನೀತಿ ನಿರ್ದೇಶನಗಳನ್ನು ಬಜೆಟ್ ಪ್ರತಿಬಿಂಬಿಸುತ್ತದೆ. ಒಂದೇ ಗ್ರಿಡ್ ರಚಿಸುವ ಮೂಲಕ ದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಸುಧಾರಿಸುವ ಕ್ರಮ, ನೀರಿನ ಮಾರ್ಗಗಳ ಪ್ರಸ್ತುತ ರಚನೆ ದೇಶದಾದ್ಯಂತ ಗ್ರಾಮೀಣ ರಸ್ತೆಗಳು ಮತ್ತು ರಸ್ತೆ ಸಂಪರ್ಕಗಳ ಸುಧಾರಣೆಗೆ ಒತ್ತು, ಸ್ವಚ್ಚ ಭಾರತ್‌ಗೆ ಆದ್ಯತೆ, ನೀರು ಸರಬರಾಜಿಗೆ ಒತ್ತು, ನೀರಿನ ಸಂರಕ್ಷಣೆ, ರೈಲ್ವೇ ಮೂಲಸೌಕರ್ಯದಲ್ಲಿ ಪ್ರಸ್ತುತ ಸುಧಾರಣಗಳು ನಿಜಕ್ಕೂ ಬಹಳ ಮುಖ್ಯವಾಗಿವೆ. ಈ ಕುರಿತಂತೆ ಎಲ್ಲವೂ ವ್ಯವಸ್ಥಿತವಾಗಿ ಜಾರಿಯಾಗಿ ನಡೆದರೆ ದೇಶದ ಸರ್ವತೋಮುಖ ಅಭಿವೃದ್ದಿಗೆ ದಾರಿ ಮಾಡಿಕೊಡುತ್ತದೆ.

-ಆರ್.ರಾಜು, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ 

ಕೇಂದ್ರ ಸರಕಾರದ ಬಜೆಟ್ ಕೇವಲ ಪ್ರಚಾರದ ಬಜೆಟ್ ಆಗಿದೆಯೇ ಹೊರತು, ಜನಸಾಮಾನ್ಯರ ಬಜೆಟ್ ಆಗಿಲ್ಲ. ರಾಜ್ಯದ 100ಕ್ಕೂ ಅಧಿಕ ತಾಲೂಕುಗಳು ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಕೇಂದ್ರ ಬಜೆಟ್‌ನಲ್ಲಿ ರಾಜ್ಯ ನೀರಾವರಿ ಯೋಜನೆಗಳಿಗೆ ಉತ್ತೇಜನಾ ನೀಡದಿರುವುದು ಬೇಸರದ ಸಂಗತಿ. 

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

ಬಡವರಿಗೆ ಹಾಗೂ ರೈತರಿಗೆ ಅನುಕೂಲವಾದ ರೀತಿಯಲ್ಲಿ ಕೇಂದ್ರ ಸರಕಾರ ಬಜೆಟ್ ಮಂಡನೆ ಮಾಡಿಲ್ಲ. ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡುವ ಪ್ರಯತ್ನವನ್ನೂ ಮಾಡಿಲ್ಲ.

-ರಮ್ಯಾ, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News