ಮೋದಿ 2.0 ಸರಕಾರದ ಮೊದಲ ಬಜೆಟ್: ಯಾರಿಗೆ ಲಾಭ, ಯಾರಿಗೆ ನಷ್ಟ?

Update: 2019-07-05 15:31 GMT

ಹೊಸದಿಲ್ಲಿ, ಜು.5: ಎರಡನೇ ಅವಧಿಯ ಮೋದಿ ಸರಕಾರದ ಮೊದಲ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರ್ಥಿಕ ಪ್ರಗತಿಗೆ ವೇಗ ನೀಡುವ ಇರಾದೆಯಿಂದ ಸಾಗರೋತ್ತರ ಹೂಡಿಕೆದಾರಿಗೆ ನೆರವಾಗಲು ನಿಯಮಗಳನ್ನು ಸಡಿಲಗೊಳಿಸಿ ಹೂಡಿಕೆಗೆ ಪ್ರೋತ್ಸಾಹ ನೀಡಲು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಶುಕ್ರವಾರ ಸಂಸತ್‌ನಲ್ಲಿ ಸೀತಾರಾಮನ್ ಮಂಡಿಸಿದ ಬಜೆಟ್‌ನಿಂದ ಕೆಲವರ ಮುಖದಲ್ಲಿ ನಗು ಮೂಡಿದ್ದರೆ ಇನ್ನು ಕೆಲವರ ಕಣ್ಣು ಕೆಂಪಾಗುವಂತೆ ಮಾಡಿದೆ. ಬಜೆಟ್‌ನಿಂದ ಯಾರ್ಯಾರು ಲಾಭ ಪಡೆದರು ಯಾರಿಗೆ ನಷ್ಟವಾಯಿತು ಎನ್ನುವುದನ್ನು ಇಲ್ಲಿ ನೀಡಲಾಗಿದೆ:

ಲಾಭ ಪಡೆದವರು

ಸರಕಾರಿ ಬ್ಯಾಂಕ್‌ಗಳು: 70,000 ಕೋಟಿ ರೂ. ಹೂರಣ ಮತ್ತು ಛಾಯಾ ಬ್ಯಾಂಕ್‌ಗಳ ಪಡೆದ ಸಾಲಗಳ ಬಾಕಿ ಮೇಲೆ ಭಾಗಶಃ ಒಂದು ಸಲದ ಖಾತ್ರಿ ನೀಡುವಿಕೆಯು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ನೆರವಾಗಲಿದೆ. ಸಾಲ ಬಾಕಿಯುಳಿಸಿರುವ ಬ್ಯಾಂಕಿಂಗ್‌ಯೇತರ ವಿತ್ತ ಕಂಪೆನಿಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಿಡಿತವನ್ನು ಬಲಪಡಿಸುವ ಮೂಲಕ ಸಾಲದಾತರಿಗೆ ರಕ್ಷಣೆ ದೊರೆಯಲಿದೆ. ಇದರಿಂದ ಮುಖ್ಯವಾಗಿ ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಯೂನಿಯನ್‌ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳು ನಿಟ್ಟುಸಿರು ಬಿಡುವಂತಾಗಿದೆ.

ಗ್ರಾಮೀಣ ಭಾರತ

ಗ್ರಾಮೀಣ ಭಾಗಗಳನ್ನು ಸಂಪರ್ಕಿಸುವ ರಸ್ತೆಗಳ ನಿರ್ಮಾಣ, ವಿದ್ಯುತ್ ಮತ್ತು ಅನಿಲ ಸಂಪರ್ಕದೊಂದಿಗೆ ಗ್ರಾಮೀಣ ಮನೆಗಳ ನಿರ್ಮಾಣದ ಮೇಲೆ ಅಧಿಕ ವೆಚ್ಚ ಮತ್ತು ಪಶು ಆಹಾರದಂತಹ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ದಿಮೆಗಳಿಗೆ ಬೆಂಬಲ ನೀಡುವ ಮೂಲಕ ಸರಕಾರದ ಅನೇಕ ಕ್ರಮಗಳು ಗ್ರಾಮೀಣ ಭಾರತದಲ್ಲಿರುವ ಕಂಪೆನಿಗಳಿಗೆ ಲಾಭವುಂಟು ಮಾಡಲಿದೆ. ಭಾರತದ ಗ್ರಾಮೀಣ ಪ್ರದೇಶದಲ್ಲಿ ಉದ್ಯಮಗಳನ್ನು ಹೊಂದಿರುವ ಗೋದ್ರೇಜ್ ಆ್ಯಗ್ರೊವೆಟ್ ಲಿ., ಹಿಂದೂಸ್ಥಾನ್ ಯುನಿಲಿವರ್ ಲಿ. ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಲಿ. ಕಂಪೆನಿಗಳು ಈ ಪಟ್ಟಿಯಲ್ಲಿ ಸೇರಿವೆ.

ವಿಮಾನಯಾನ

ವೈಮಾನಿಕ ಕ್ಷೇತ್ರವನ್ನು ವಿದೇಶಿ ನೇರ ಹೂಡಿಕೆಗೆ ತೆರೆಯುವ ಬಗ್ಗೆ ಪರಿಗಣಿಸಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ. ಸರಕಾರಿ ಸ್ವಾಮ್ಯದ ಆರ್ ಇಂಡಿಯಾ ಲಿ.ಅನ್ನು ಮಾರಾಟ ಮಾಡಲು ಮತ್ತೊಂದು ಯೋಜನೆ ಘೋಷಿಸುವುದರ ಜೊತೆಗೆ ವೈಮಾನಿಕ ಹೂಡಿಕೆ ಮತ್ತು ಭೋಗ್ಯಕ್ಕೆ ನೀಡುವ ಹೊಸ ಯೋಜನೆಯನ್ನೂ ಸರಕಾರ ಘೋಷಿಸಿದೆ. ಇದರಿಂದಾಗಿ ಏರ್ ಇಂಡಿಯಾ ಲಿ., ಸ್ಪೈಸ್‌ಜೆಟ್ ಲಿ., ಇಂಟರ್ ಗ್ಲೋಬ್ ಏವಿಯೇಶನ್ ಲಿ. ಮತ್ತು ಟಾಟ ಸಿಯಾ ಆರ್‌ಲೈನ್ಸ್ ಲಿ.ಗೆ ಲಾಭವಾಗಲಿದೆ.

ನೀರು

2024ರ ಒಳಗಾಗಿ ಭಾರತದ ಪ್ರತಿ ಮನೆಗೆ ಕೊಳವೆ ಮೂಲಕ ನೀರು ಪೂರೈಕೆ ಮಾಡುವ ಮತ್ತು ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ದೇಶದ ಹರಡಿಕೊಂಡಿರುವ ಜಲ ಪೂರೈಕೆಯನ್ನು ಕ್ರೋಢೀಕರಿಸಿದೇಶದ ಸಂಪನ್ಮೂಲವನ್ನು ನಿಭಾಯಿಸುವುದರ ಮೇಲೆ ಗಮನಹರಿಸಿರುವುದು ಭಾರತದಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆಯ ಗಂಭೀರತೆಯನ್ನು ಬಿಂಬಿಸುತ್ತದೆ. ಶಕ್ತಿ ಪಂಪ್ಸ್ ಇಂಡಿಯಾ ಲಿ., ಜೈನ್ ಇರಿಗೇಶನ್ ಸಿಸ್ಟಮ್ ಲಿ., ಕೆಎಸ್‌ಬಿ ಲಿ., ಕೊರ್ಲೋಸ್ಕರ್ ಬ್ರದರ್ಸ್ ಲಿ., ವಿಎ ಟೆಕ್ ವಬಗ್ ಲಿ., ಜೆಕೆ ಆ್ಯಗ್ರಿ ಜೆನೆಟಿಕ್ಸ್ ಲಿ. ಮತ್ತು ಪಿಐ ಇಂಡಸ್ಟ್ರೀಸ್ ಲಿ. ಇದರ ಲಾಭ ಪಡೆಯಬಹುದು.

ಬಾಡಿಗೆ ಮನೆ

ನಿರ್ಮಲಾ ಸೀತಾರಾಮನ್ ಮಾದರಿ ಬಾಡಿಗೆದಾರರ ಕಾನೂನು ರಚಿಸುವ ಭರವಸೆ ನೀಡಿರುವುದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಸ್ವಲ್ಪ ಸಾಂತ್ವ ನೀಡಿದೆ. ಮುಖ್ಯವಾಗಿ ಮನೆ ಖರೀದಿಸುವುದು ಅತ್ಯಂತ ದುಬಾರಿಯಾಗಿರುವ ಮುಂಬೈಯಂತಹ ನಗರಗಳಲ್ಲಿ ಲಕ್ಷಾಂತರ ಜನರು ಬಾಡಿಗೆ ಅಥವಾ ಭೋಗ್ಯದ ಮನೆಗಳಲ್ಲಿ ಜೀವಿಸುತ್ತಿದ್ದಾರೆ. ಅವರಿಗೆ ಈ ಬೆಳವಣಿಗೆ ಹರ್ಷ ತಂದಿದೆ.

ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ

ಸೀತಾರಾಮನ್ 2022ರ ವೇಳೆಗೆ 19.5 ಕೋಟಿ ಮನೆಗಳನ್ನು ನಿರ್ಮಿಸುವ ಭರವಸೆ ನೀಡಿದ್ದಾರೆ. ಇದರಿಂದ ಲಾರ್ಸನ್ ಆ್ಯಂಡ್ ಟೂಬ್ರೊ ಲಿ., ದಿಲಿಪ್ ಬಿಲ್ಡ್‌ಕೊನ್ ಲಿ., ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಲಿ., ಜಿಎಂಆರ್ ಇನ್‌ಫ್ರಾಸ್ಟ್ರಕ್ಚರ್ ಲಿ., ಒಬೆರಾಯ್ ರಿಯಲ್ಟಿ ಲಿ., ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರೊಜೆಕ್ಟ್ಸ್ ಲಿ. ಮತ್ತು ಡಿಎಲ್‌ಎಫ್ ಲಿ. ಕಂಪೆನಿಗಳಿಗೆ ಲಾಭವಾಗಲಿದೆ.

ನಷ್ಟ ಅನುಭವಿಸಿದವರು:

ಆಭರಣ, ಚಿನ್ನ ಆಮದುದಾರರು

ಚಿನ್ನದ ಮೇಲೆ ಆಮದು ತೆರಿಗೆ ಏರಿಸಿರುವುದರಿಂದ ಆಗಸ್ಟ್‌ನಲ್ಲಿ ಆರಂಭಗೊಳ್ಳಲಿರುವ ಮದುವೆ ಹಾಗೂ ಹಬ್ಬಗಳ ಮಾಸಕ್ಕೂ ಮುನ್ನ ಹಳದಿ ಲೋಹದ ಖರೀದಿ ಮತ್ತಷ್ಟು ದುಬಾರಿಯಾಗಲಿದೆ. ಸೀತಾರಾಮನ್ ಚಿನ್ನದ ಆಮದಿನ ಮೇಲಿನ ತೆರಿಗೆಯನ್ನು 10 ಶೇ.ದಿಂದ 12.5 ಶೇ.ಕ್ಕೆ ಏರಿಸಿದ್ದಾರೆ. ಸರಕಾರದ ಈ ನಿರ್ಧಾರದಿಂದ ಟೈಟನ್ ಕೊ., ಪಿಸಿ ಜ್ಯುವೆಲರ್ಸ್, ವೈಭವ್ ಗ್ಲೋಬಲ್ ಲಿ. ಮತ್ತು ತ್ರಿಭುವನದಾಸ್ ಭೀಮ್‌ಜಿ ಝವೇರಿ ಲಿ. ನಷ್ಟ ಅನುಭವಿಸಲಿವೆ.

ರಕ್ಷಣಾ ಇಲಾಖೆ

2019-20ರ ಸಾಲಿಗೆ ಭಾರತೀಯ ರಕ್ಷಣಾ ವೆಚ್ಚಕ್ಕಾಗಿ ಫೆಬ್ರವರಿಯ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ಮೀಸಲು ನಿಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮಧ್ಯಂತರ ಚುನಾವಣೆಯಲ್ಲಿ ರಕ್ಷಣಾ ಮೀಸಲು ನಿಧಿಯನ್ನು 3.05 ಟ್ರಿಲಿಯನ್ ರೂ. ಎಂದು ನಿಗದಿಪಡಿಸಲಾಗಿತ್ತು. ಸೇನಾ ಉಪಕರಣಗಳ ಕಸ್ಟಮ್ಸ್ ಸುಂಕ ವಿನಾಯಿತಿಯೊಂದೇ ಸಶಸ್ತ್ರಪಡೆಗಳಿಗೆ ಸೀತಾರಾಮನ್ ನೀಡಿದ ಸಿಹಿಸುದ್ದಿಯಾಗಿದೆ.

ಶ್ರೀಮಂತ ಮತ್ತು ಮಧ್ಯಮ ಆದಾಯ ಗಳಿಕೆದಾರರು

ವಾರ್ಷಿಕ ಎರಡು ಕೋಟಿ ರೂ.ಗಿಂತ ಅಧಿಕ ಆದಾಯದ ಮೇಲೆ ತೆರಿಗೆ ಹೆಚ್ಚಿಸುವ ಮೂಲಕ ವಿತ್ತ ಸಚಿವೆ ಶ್ರೀಮಂತ ಮತ್ತು ಮಧ್ಯಮ ವರ್ಗದ ಮೇಲೆ ಬರೆ ಎಳೆದಿದ್ದಾರೆ. ಬ್ಯಾಂಕ್‌ಗಳಿಂದ ವಾರ್ಷಿಕ ಒಂದು ಕೋಟಿಗೂ ಅಧಿಕ ಮೊತ್ತ ಹಿಂಪಡೆಯುವುದರ ಮೇಲೆ ಶೇ.2 ತೆರಿಗೆ ವಿಧಿಸುವ ಮೂಲಕ ನಗದು ಪಾವತಿಗೆ ಕಡಿವಾಣ ಹಾಕಲು ಮೋದಿ ಸರಕಾರ ನಿರ್ಧರಿಸಿದೆ. ತೆರಿಗೆ ಪಾವತಿದಾರರು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೆಚ್ಚುವರಿ ಎರಡು ರೂ. ವೆಚ್ಚ ಮಾಡಬೇಕಾಗಿದೆ. ಇದರಿಂದ ಪ್ರಯಾಣ ಮತ್ತು ಆಹಾರದ ಬೆಲೆಯಲ್ಲಿ ಏರಿಕೆಯಾಗುವ ಕಾರಣ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ.

ವಾಹನ ಬಿಡಿಭಾಗಗಳು

ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವ ಸರಕಾರದ ನಿರ್ಧಾರ ವಾಹನ ಬಿಡಿಭಾಗ ತಯಾರಕರ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ. ಭಾರತವನ್ನು ವಿದ್ಯುತ್ ಚಾಲಿತವಾಹನ ತಯಾರಕರ ತಾಣವನ್ನಾಗಿ ಮಾಡುವುದಾಗಿ ಸರಕಾರ ಘೋಷಿಸಿರುವುದು ಮತ್ತು ವಿದ್ಯುತ್‌ಚಾಲಿತ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ 5ಕ್ಕೆ ಇಳಿಸಿರುವುದು ಮಾತ್ರವಲ್ಲದೆ ಪ್ರಮುಖ ವಾಹನ ಬಿಡಿಭಾಗಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಏರಿಕೆ ಮಾಡಿದೆ. ಈ ನಡೆಯಿಂದ ಮದರ್ಸನ್ ಸುಮಿ ಸಿಸ್ಟಮ್ಸ್ ಲಿ., ಭಾರತ್ ಫೋರ್ಜ್ ಲಿ., ಮಿಂಡ ಇಂಡಸ್ಟ್ರೀಸ್ ಲಿ., ಶ್ರೀರಾಮ್ ಪಿಸ್ಟನ್ಸ್ ಆ್ಯಂಡ್ ರಿಂಗ್ಸ್ ಲಿ. ಹಾಘೂ ಗ್ರೂವ್ಸ್ ಕಾಟನ್ ಜಿಆರ್‌ವಿ ಇನ್.ಗೆ ನಷ್ಟವಾಗಲಿದೆ.

ನದಿಗಳು ಮತ್ತು ಪರಿಸರ

ಭಾರತದ ನದಿಗಳನ್ನು ಸರಕು ಸಾಗಿಸಲು ಹೆಚ್ಚು ಬಳಸಬೇಕು ಎಂದು ವಿತ್ತ ಸಚಿವೆ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಇದರಿಂದ ಆಂತರಿಕ ವ್ಯಾಪಾರದಲ್ಲಿ ಸಂಚಲನ ಉಂಟಾಗುವುದು ಮತ್ತು ಸರಕು ಮತ್ತು ಸೇವಾ ತೆರಿಗೆಗೆ ಪೂರಕವಾಗಿದೆ ಎಂದು ಅದರ ಬೆಂಬಲಿಗರು ತಿಳಿಸಿದ್ದಾರೆ. ಆದರೆ ಟೀಕಾಕಾರರ ಪ್ರಕಾರ, ಈ ಕ್ರಮದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಮತ್ತು ಪರಿಸರ ವ್ಯವಸ್ಥೆಯನ್ನು ಹಾಳುಗೆಡವಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News