ಪಕ್ಷದ ಚೌಕಟ್ಟಿನಲ್ಲೇ ‘ಅಹಿಂದ’ ಸಮಾವೇಶ ಮಾಡುತ್ತೇನೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-07-05 15:49 GMT

ಬೆಂಗಳೂರು, ಜು. 5: ‘ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರಿದ್ದಾರೆಂದು ಬಿಜೆಪಿಯವರಿಗೆ ಹೇಗೆ ಗೊತ್ತು. ಬಿಜೆಪಿಯವರು ಆಮಿಷ ಒಡ್ಡುತ್ತಿರುವುದರಿಂದಲೇ ಗೊತ್ತಾಗುತ್ತದೆ. ವಿಧಾನ ಮಂಡಲ ಅಧಿವೇಶನದಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಪ್ರಯತ್ನ ನಡೆಸಿದ್ದು, ಇದರಲ್ಲಿ ಅವರು ಯಾವುದೇ ಕಾರಣಕ್ಕೂ ಯಶಸ್ಸು ಕಾಣುವುದಿಲ್ಲ. ಸರಕಾರ ಅಸ್ಥಿರಗೊಳಿಸುವುದಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಟೀಕಿಸಿದರು.

ಪಕ್ಷದ ಶಾಸಕರನ್ನು ಬಾಂಬೆಗೆ ಕರೆದುಕೊಂಡು ಹೋಗಿದ್ದು ಸುಳ್ಳೇ? ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಅವರು ಉಮೇಶ್ ಜಾಧವ್ ಅವರ ಜತೆ ಇದ್ದದ್ದು ಸುಳ್ಳೇ ? ಆಡಿಯೋ ಪ್ರಕರಣದ ಸಿಟ್ ತನಿಖೆ ತಂಡ ರಚನೆ ಬಗ್ಗೆಯೂ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಯಾವಾಗಬೇಕಾದರೂ ರಾಜೀನಾಮೆ ನೀಡಬಹುದು. ಸಂಬಂಧಿಸಿದವರಿಗೆ ನೇರವಾಗಿ ತಲುಪಿಸಬೇಕು. ಅವರೊಂದಿಗೆ ಮಾತನಾಡಿ ನಮಗೆ ಬೇಸರವಾಗಿದೆ ಎಂದು ಸಿದ್ದರಾಮಯ್ಯ ನುಡಿದರು.

ಪಕ್ಷದ ಚೌಕಟ್ಟಿನಲ್ಲೇ ‘ಅಹಿಂದ’ ಸಮಾವೇಶ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಅಂದರೆ ಅಹಿಂದ. ಅಹಿಂದ ಎಂದರೆ ತುಳಿತಕ್ಕೆ ಒಳಗಾದವರು. ಅವರ ಪರ ಕೆಲಸ ಮಾಡುವುದು ಕಾಂಗ್ರೆಸ್ ಜವಾಬ್ದಾರಿ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.

ಹುಣಸೂರು ಕ್ಷೇತ್ರ ಶಾಸಕ ಎಚ್.ವಿಶ್ವನಾಥ್ ಹಾಗೂ ಬಿಜೆಪಿ ಮುಖಂಡ ಈಶ್ವರಪ್ಪ ಅವರಿಗೆ ನನ್ನ ಮೇಲೆ ಅಸೂಯೆ. ಹೀಗಾಗಿ ಪದೇ ಪದೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅವರಿಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News