ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಎಬಿವಿಪಿ ಸದಸ್ಯರಲ್ಲ: ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ

Update: 2019-07-05 16:03 GMT

ಬೆಂಗಳೂರು, ಜು.5: ಪುತ್ತೂರಿನ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಎಬಿವಿಪಿ ಸದಸ್ಯರಲ್ಲವೆಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡನೀಯವಾದದ್ದು. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು ಅಭಿನಂದನೀಯ. ಈ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದಕ್ಕಾಗಿ ನ್ಯಾಯಾಲಯ ತುರ್ತು ವಿಚಾರಣೆಯನ್ನು ನಡೆಸಬೇಕು. ಈ ಆರೋಪಿಗಳನ್ನು ಎಬಿವಿಪಿಯ ಹೆಸರಿನೊಂದಿಗೆ ತಳುಕು ಹಾಕಿ ಸಂಘಟನೆಯ ಹೆಸರಿಗೆ ಅವಮಾನ ಮಾಡುವ ವ್ಯವಸ್ಥಿತ ಷಡ್ಯಂತರವೊಂದು ನಡೆಯುತ್ತಿದೆ. ಈ ಘಟನೆಯಲ್ಲಿ ಭಾಗಿಯಾದ ಯಾರೊಬ್ಬರೂ ನಮ್ಮ ಸಂಘಟನೆಗೆ ಸೇರಿದವರಲ್ಲ. ಈ ಕುರಿತು ಅಪಪ್ರಚಾರವನ್ನು ಕೂಡಲೇ ನಿಲ್ಲಿಸಬೇಕು.

ವಿದ್ಯಾರ್ಥಿ ಸಮುದಾಯವನ್ನು ದಾರಿ ತಪ್ಪಿಸಿ ಅಪರಾಧಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಡ್ರಗ್ಸ್ ಜಾಲ ಸಕ್ರಿಯವಾಗಿದ್ದು, ಕೂಡಲೇ ಪೊಲೀಸ್ ಇಲಾಖೆ ಇಂತಹ ಜಾಲವನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು. ಮತ್ತು ಜಿಲ್ಲೆಯಲ್ಲಿ ಹೆಚ್ಚಾಗಿರುವ ಮಾದಕ ವಸ್ತುಗಳ ಬಳಕೆಯಿಂದ ಯುವಜನರು ಹಾದಿ ತಪ್ಪುತ್ತಿರುವ ಕುರಿತ ಇಂತಹ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News