ಸ್ಮಾರ್ಟ್‌ಸಿಟಿ ಕೆಲಸ ವೇಗವಾಗಿ ಸಾಗಲಿ: ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್

Update: 2019-07-05 17:03 GMT

ಬೆಳಗಾವಿ, ಜು.5: ಸ್ಮಾರ್ಟ್‌ಸಿಟಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಆದಷ್ಟು ಬೇಗ ಜಾರಿಗೆ ತರುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು, ಇಲ್ಲವಾದಲ್ಲಿ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿಯಲ್ಲಿ ಭೋಪಾಲ್‌ನಲ್ಲಿ ಅಳವಡಿಸಿರುವಂತ ಸೈಕಲ್ ಟ್ರಾಕ್ ಅನ್ನು ಆದಷ್ಟು ಬೇಗ ಮಾಡಬೇಕು ಎಂದರು.

ಸ್ಮಾರ್ಟ್‌ಸಿಟಿಯಲ್ಲಿ ಪ್ರತಿಯೊಬ್ಬ ಇಂಜಿನಿಯರ್‌ಗಳು ಕಾಮಗಾರಿಗಳನ್ನು ಮಂದಗತಿಯಲ್ಲಿ ನಡೆಸುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತದೆಯಾ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು, ಎರಡು ಉದ್ಯಾನವನ ಅಷ್ಟೇ ಅಲ್ಲದೇ ನಗರದಲ್ಲಿರುವ ಎಲ್ಲ ಉದ್ಯಾನವನಗಳನ್ನು ತಮ್ಮ ಅಧೀನದಲ್ಲಿ ತೆಗೆದುಕೊಂಡು ಅವುಗಳನ್ನು ಸುಧಾರಣೆ ಮಾಡಿ ಸಾರ್ವಜನಿಕರಿಗೆ ಅನುವು ಮಾಡಿ ಕೊಡಿ ಎಂದು ಸೂಚಿಸಿದರು.

ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ನೇರವಾಗಿ ಬಸ್‌ಗಳು ಬಂದು ನಿಲ್ಲುವ ರೀತಿಯಲ್ಲಿ ಪೊಲೀಸರ ಸಹಾಯ ತೆಗೆದುಕೊಂಡು ವ್ಯವಸ್ಥೆ ಮಾಡಬೇಕು ಎಂದು ಖಾದರ್ ಹೇಳಿದರು.

ಕ್ಯಾಮೆರಾ ಮತ್ತು ಸ್ಪೀಕರ್: ಸ್ಮಾರ್ಟ್ ಮತ್ತು ಸುರಕ್ಷಿತ ನಗರ ನಿರ್ಮಿಸಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ರಸ್ತೆಗಳ ಪಕ್ಕದಲ್ಲಿ ಶಾಶ್ವತ ವಿಜಿಲನ್ಸ್ ಕ್ಯಾಮೆರಾಗಳು ಹಾಗೂ ಅನೋನ್ಸ್‌ಮೆಂಟ್ ಸ್ಪೀಕರ್ಸ್‌ ಅಳವಡಿಕೆ ಮಾಡಬೇಕು ಎಂದು ಅವರು ಹೇಳಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿಯು ದೇಶದಲ್ಲಿ 40ನೇ ಸ್ಥಾನ ಹಾಗೂ ರಾಜ್ಯದಲ್ಲಿ 5 ನೇ ಸ್ಥಾನದಲ್ಲಿದೆ. ಬೆಳಗಾವಿಯ ಅಭಿವೃದ್ಧಿಗಾಗಿ 125 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆ ಮಾಡುವ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದ ಅವರು, ಮೊದಲನೇ ಹಂತದಲ್ಲಿ ಆಯ್ಕೆಯಾದ ಬೆಳಗಾವಿ 40ನೇ ಸ್ಥಾನಕ್ಕೆ ಕುಸಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಬೆಳಗಾವಿ ನಗರವನ್ನು ನಿರ್ಭಯವಾದ ನಗರವನ್ನಾಗಿ ಮಾಡಬೇಕು. ಬೆಳಗಾವಿಯಲ್ಲಿರುವ ಪ್ರತಿಯೊಂದು ರಸ್ತೆಗಳು ಕಳಪೆ ಮಟ್ಟದಲ್ಲಿವೆ, ಆದಷ್ಟು ಬೇಗ ಅವುಗಳನ್ನು ಸರಿಪಡಿಸಬೇಕು. ಯಾರು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ, ಯಾರಾದರೂ ಗುತ್ತಿಗೆದಾರರು ತಮಗೆ ಕೊಟ್ಟಿರುವ ಗುತ್ತಿಗೆಯನ್ನು ಬೇರೆಯವರಿಗೆ ನೀಡಿದರೆ ಅವರ ಗುತ್ತಿಗೆಯನ್ನು ರದ್ದುಗೊಳಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಖಾದರ್ ಸೂಚಿಸಿದರು.

ಆಸ್ಪತ್ರೆ ಆರಂಭ ಮಾಡಲು 10-15 ಕೋಟಿ ರೂ.ಆಗಬಹುದು, ಹಾಗಾಗಿ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡಿಕೊಳ್ಳಬೇಕು. ರಾಜ್ಯಕ್ಕೆ ಬೆಳಗಾವಿಯಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗಳು ಮಾದರಿಯಾಗಬೇಕು. ಖಾಸಗಿ ಪಶು ವೈದ್ಯಕೀಯ ಆಸ್ಪತ್ರೆಗಳನ್ನು ಪರಿಶೀಲನೆ ಮಾಡಿ ಅದಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಹೇಳಿದರು.

ಶ್ರೀನಗರದ ಸ್ವಾಮಿ ಉದ್ಯಾನವನವನ್ನು ಪರಿವೀಕ್ಷಣೆ ಮಾಡಿ ಆದಷ್ಟು ಬೇಗ ಉದ್ಯಾನವನವನ್ನು ಸಿದ್ಧಗೊಳಿಸಿ ಎಂದರು. ಸಾರ್ವಜನಿಕರಿಗೆ ಅಶೋಕ ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ 40 ಎಕರೆ ಜಾಗದಲ್ಲಿ ನಿರ್ಮಾಣ ಮಾಡಿರುವ ಮೈದಾನದಲ್ಲಿ ಸ್ಥಾಪಿತವಾದ ವ್ಯಾಯಾಮ ಶಾಲೆ, ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳವನ್ನು ಪರಿವೀಕ್ಷಣೆ ಮಾಡಿ ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಕಡಿಮೆ ವೆಚ್ಚದಲ್ಲಿ ಆಟವಾಡಲು ಅವಕಾಶ ಮಾಡಿ ಕೊಡಬೇಕು ಎಂದು ಅವರು ಹೇಳಿದರು.

ಪ್ರತಿಯೊಬ್ಬ ಕ್ರೀಡಾಪಟು ಅವಕಾಶದಿಂದ ವಂಚಿತರಾಗಬಾರದು ಹಾಗೂ ಇದೇ ಮೈದಾನದಲ್ಲಿ ಫುಟ್ಬಾಲ್ ಮೈದಾನವನ್ನು ಸಹ ಮಾಡಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾನಗರ ಪಾಲಿಕೆ ಆಯುಕ್ತ ಶ್ರೀಧರ ಕುರೇರ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರಿತಮ್ ನಸ್ಲಾಪೂರೆ, ಸ್ಮಾರ್ಟ್‌ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ ಸೇರಿದಂತೆ ಸ್ಮಾರ್ಟ್‌ಸಿಟಿ ಹಾಗೂ ಮಾಹಾನಗರ ಪಾಲಿಕೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News