ಎಮ್ಮೆ ಮೇಯಿಸಿ, ಕಡಲೆಕಾಯಿ ತಿಂದು ಬೆಳೆದ ದಿನಗಳನ್ನು ನಾನೆಂದೂ ಮರೆಯಲಾರೆ: ಅಕ್ರಮ್ ಪಾಷ

Update: 2019-07-05 17:56 GMT

ಹಾಸನ, ಜು.5: ಇರುವಷ್ಟು ದಿನ ಹಾಸನವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವಲ್ಲಿ ನಾನು ಶ್ರಮಿಸುತ್ತೇನೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪ್ರಥಮ ಬಾರಿಗೆ ಆಗಮಿಸಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು ತಮ್ಮ ಮನದಾಳದ ಮಾತುಗಳನ್ನು ಕೆಲ ಸಮಯ ಹಂಚಿಕೊಂಡರು. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಜನ ಸಾಮಾನ್ಯರು ಅನೇಕ ಬಾರಿ ಕಚೇರಿಗೆ ಬಂದು ಅಲೆಯುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೆರಳಿ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದರು.

ಕಳೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಜೈನ ಬಸದಿಗಳ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತ ಇಲಾಖೆಯಿಂದ 10 ಕೋಟಿ ರೂ. ಅನುದಾನವನ್ನು ನೀಡಲಾಗಿತ್ತು. ಈ ಎಲ್ಲಾ ಸೇವೆಗಳನ್ನೂ ಪರಿಗಣಿಸಿ ರಾಜ್ಯ ಸರ್ಕಾರ ತಮಗೆ ನಾಗರಿಕ ಸೇವಾ ಪ್ರಶಸ್ತಿ, ಸರ್ವೋತ್ತಮ ನಾಗರಿಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇದೀಗ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸಭೆಗಳನ್ನು ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ರೈತರ ಸಮಸ್ಯೆ, ಕಂದಾಯ ಇಲಾಖೆ ಸಮಸ್ಯೆ, ಭೂಮಿ ಸಮಸ್ಯೆ, ಖಾತೆ ಮಾಡಿಕೊಡುವಲ್ಲಿ ವಿಳಂಬ, ಸರ್ವೆ ಕಾರ್ಯಗಳು, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ನಡುವಿನ ಸಮಸ್ಯೆಗಳ ಬಗ್ಗೆ ಈಗಾಗಲೇ ಗಮನ ಹರಿಸಿದ್ದೇನೆ. ಜೊತೆಗೆ ಪಿಂಚಣಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಹಾಸನ ಜಿಲ್ಲೆ ಭೌಗೋಳಿಕ ಮತ್ತು ಪ್ರಾಕೃತಿಕವಾಗಿ ಸುಂದರವಾಗಿದೆ. ಇಲ್ಲಿ ಪ್ರವಾಸಕ್ಕೆ ಹೆಚ್ಚಿನ ಅವಕಾಶಗಳಿದ್ದು, ಇದರ ಬಗ್ಗೆಯೂ ಹೆಚ್ಚಿನ ಗಮನ ಹರಿಸಿದ್ದೇವೆ ಎಂದ ಅವರು, ರೈತರ ಹಾಗೂ ಬಡವರ ಸಮಸ್ಯೆಗಳಿಗೆ ಹೆಚ್ಚು ಸ್ಪಂದನೆ ಕೊಡಲಾಗುವುದು. ಜಿಲ್ಲಾಧಿಕಾರಿಯಾದ ನಂತರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇನೆ. ಇಡೀ ರಾಜ್ಯದಲ್ಲಿ ಹಾಸನ ಜಿಲ್ಲೆಯನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯುವುದು ನನ್ನ ಮೊದಲ ಗುರಿ ಎಂದು ಹೇಳಿದರು. 

ಬಾಲ್ಯ ಜೀವನ
ನಾನು ಮಧುಗಿರಿ ತಾಲೂಕಿನ ಕಟ್ಟ ಕಡೆಯ ಗ್ರಾಮವಾದ ಸಿಂಗರಾಯಪ್ಪನ ಹಳ್ಳಿಯಲ್ಲಿ ಜನಿಸಿದೆ. ಅದೇ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ಪಡೆದೆ. ನಂತರ ಮಧುಗಿರಿಯಲ್ಲಿ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಪೂರೈಸಿದೆ. ಚಿಕ್ಕಬಳ್ಳಾಪುರದಲ್ಲಿ ಪದವಿ, ಬೆಂಗಳೂರು ಜ್ಞಾನಭಾರತಿಯಲ್ಲಿ ಎಂ.ಎ., ಎಂ.ಫಿಲ್ ಪಡೆದೆ. ನಂತರ ನಾನು ಓದಿದ ಚಿಕ್ಕಬಳ್ಳಾಪುರದ ಕಾಲೇಜಿನಲ್ಲೇ ಅತಿಥಿ ಶಿಕ್ಷಕನಾಗಿ ನೇಮಕಗೊಂಡೆ. ಬಳಿಕ ಖಾಯಂ ಬೋಧಕನಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. 2003ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, 2005ರಲ್ಲಿ ಮೈಸೂರಿನಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿಯಾಗಿ ತರಬೇತಿ ಪಡೆದು ಮಡಿಕೇರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದೆ ಎಂದು ಹೇಳಿದರು.

ಹಿಂದೆ ಸಚಿವರಾಗಿದ್ದ ಮುಮ್ತಾಜ್ ಆಲಿ ಖಾನ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದೇನೆ. ನಂತರ ಅಲ್ಪಸಂಖ್ಯಾತರ ಇಲಾಖೆಯ ಆಯುಕ್ತನಾಗಿ ಐದೂವರೆ ವರ್ಷಗಳ ಕಾಲ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತು. ಅಂದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ನನ್ನ ಸೇವಾ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹಾಸ್ಟೆಲ್ ವ್ಯವಸ್ಥೆ, ಮೊರಾರ್ಜಿ ಶಾಲೆಗಳ ಸ್ಥಾಪನೆ ಹಾಗೂ ಕೆ.ಎ.ಎಸ್, ಐ.ಪಿ.ಎಸ್. ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ನಾನು ಬಡತನದ ಜೀವನ ಮರೆತಿಲ್ಲ. ಓರ್ವ ಡ್ರೈವರ್ ಮಗನಾಗಿ ಬಡತನದಿಂದಲೇ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದೆ. ಹಳ್ಳಿಯಲ್ಲೇ ಸಾಕಷ್ಟು ಕಾಲ ಜೀವನ ನಡೆಸಿದೆ. ಎಮ್ಮೆಗಳನ್ನು ಮೇಯಿಸಿಕೊಂಡು, ಕೆರೆಯಲ್ಲಿ ಅವುಗಳಿಗೆ ಸ್ನಾನ ಮಾಡಿಸಿ, ಕಡಲೆಕಾಯಿ ತಿಂದು ಬೆಳೆದಂತಹ ಜೀವನವನ್ನು ನಾನೆಂದೂ ಮರೆಯುವುದಿಲ್ಲ ಎಂದು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ನಾನು ಓದಿದ ಶಾಲೆಯಲ್ಲಿನ ಎಲ್ಲ ಮಕ್ಕಳಿಗೂ ಉಚಿತ ಪಠ್ಯಪುಸ್ತಕಗಳನ್ನು ವಿತರಣೆ ಮಾಡುತ್ತೇನೆ. ನನ್ನ ಜೀವನ ಶೈಲಿ ಹೇಗಿತ್ತು ಎಂಬುದರ ಬಗ್ಗೆ ನನ್ನ ಹಳ್ಳಿಯ ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದರು.

ನಾ ಓದಿದ ಹಳ್ಳಿಯ ಶಾಲೆ ಬಿದ್ದು ಹೋಗುವ ಹಂತದಲ್ಲಿತ್ತು. ಕೆಲ ಶಾಸಕರ ಸಹಾಯದಿಂದ ಅದನ್ನು ಸುಸಜ್ಜಿತವಾಗಿಸಿದ್ದೇನೆ. ಈಗ ಶಾಲೆಯ ಪ್ರಾಥಮಿಕ ಶಿಕ್ಷಣವನ್ನು ಸ್ಮಾರ್ಟ್ ಕ್ಲಾಸ್ ರೀತಿ ಬೋಧನೆ ಮಾಡಲಾಗುತ್ತಿದೆ ಎಂದು ಅಕ್ರಂ ಪಾಷ ಹೇಳಿದರು. ಇದೇ ರೀತಿ ಹಾಸನ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಸ್ಮಾರ್ಟ್ ಕ್ಲಾಸ್ ಆರಂಭಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಅಲ್ಲದೆ ಈ ಸಂಬಂಧ ಕೆಲ ಕಂಪೆನಿಗಳೊಂದಿಗೂ ಚರ್ಚಿಸಲಾಗಿದೆ. ಶೀಘ್ರವೇ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.

ನನ್ನ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗ ನಾನು. ಈಗ ಕುಟುಂಬದ ಹಲವರನ್ನು ನಾನೇ ಓದಿಸುತ್ತಿದ್ದೇನೆ. ಯಾರ ಪ್ರಭಾವಕ್ಕೂ ಒಳಗಾಗದೇ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದೇನೆ. ಜೀವನದಲ್ಲಿ ಬಡತನದಿಂದ ಬಂದಿರುವ ಬಗ್ಗೆ ನಾನು ಎಂದಿಗೂ ಮರೆಯುವುದಿಲ್ಲ ಎಂದು ಹಳೆಯ ನೆನಪುಗಳನ್ನು ಮತ್ತು ತಮ್ಮ ಕರ್ತವ್ಯವನ್ನು ಹೇಳಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದದಿಂದ ಮೈಸೂರು ಪೇಟ ತೊಡಿಸಿ, ಗಂಧದ ಹಾರ ಹಾಕಿ, ಶಾಲು ಹೊದಿಸಿ ಫಲಪುಷ್ಪವನ್ನು ಕೊಡುವುದರ ಮೂಲಕ ಆತ್ಮೀಯವಾಗಿ ಪತ್ರಕರ್ತರ ಸಂಘದಿಂದ ಸ್ವಾಗತಿಸಲಾಯಿತು.

ಈ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್, ಹಿರಿಯ ಪತ್ರಕರ್ತ ಹಾಗೂ ಜನಮಿತ್ರ ದಿನ ಪತ್ರಿಕೆ ಸಂಪಾದಕ ಹೆಚ್.ಬಿ. ಮದನಗೌಡ, ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಜೆ.ಆರ್.ಕೆಂಚೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ.ಸುರೇಶ್, ಖಜಾಂಚಿ ರಾಜೇಶ್, ನಗರ ಕಾರ್ಯದರ್ಶಿ ಸಿ.ಬಿ.ಸಂತೋಷ್, ವಾರ್ತಾಧಿಕಾರಿ ವಿನೋದ್ ಚಂದ್ರ ಇತರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News