ಹಾಸನ: ಗುಂಪು ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿ ಧರಣಿ
ಹಾಸನ, ಜು.5: ಗುಂಪು ಹತ್ಯೆ ಕೋರರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಎಲ್ಲಾ ಸಮುದಾಯದವರ ರಕ್ಷಣೆಗೆ ವಿಶೇಷ ಕಾನೂನು ರೂಪಿಸುವಂತೆ ಆಗ್ರಹಿಸಿ ಮುಸ್ಲಿಮ್ ಮತ್ತು ಸರ್ವ ಧರ್ಮಗಳ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಾರ್ಖಂಡ್ ನ 24 ವರ್ಷದ ಮುಸ್ಲಿಂ ಯುವಕ ತಬ್ರೆಸ್ ಅನ್ಸಾರಿ ಎಂಬ ಅಮಾಯಕ ಯುವಕನ ಮೇಲೆ ಅಲ್ಲಿನ ಕೋಮುವಾದಿ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಂದಿದ್ದಾರೆ. ಈ ಅಮಾನವೀಯ ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸದೇ ಅಲ್ಲಿನ ಕೋಮುವಾದಿ ಪೊಲೀಸರು ಹಲ್ಲೆಗೆ ಒಳಗಾದ ಸಂತ್ರಸ್ತರನ್ನು ಠಾಣೆಯಲ್ಲಿ ಕೂಡಿ ಹಾಕಿದ್ದರು ಎಂದು ಕಿಡಿಕಾರಿದರು.
ವ್ಯವಸ್ಥಿತವಾಗಿ ಮುಸ್ಲಿಂ ಸಮುದಾಯದ ಮೇಲೆ ದಾಳಿ ಮಾಡುತ್ತಿರುವ ಫ್ಯಾಸಿಸ್ಟ್ ಸಂಘಟನೆಗಳನ್ನು ನಿಷೇಧಿಸಬೇಕು. ತಬ್ರೇಸ್ ಅನ್ಸಾರಿ ಹಾಗೂ ದಯಾನತ್ ಖಾನ್ ಹತ್ಯೆಯ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷಗೆ ಒಳಪಡಿಸುವಂತೆ ಒತ್ತಾಯಿಸಿದರು. ಸಂತ್ರಸ್ತರ ಜೊತೆ ಅಮಾನವೀಯವಾಗಿ ವರ್ತಿಸಿ ಕಳ್ಳ ಪಟ್ಟ ಹೊರಿಸಿ ಪ್ರಕರಣ ದಾಖಲಿಸಿ ವೈದ್ಯಕೀಯ ಚಿಕಿತ್ಸೆ ಕೊಡಿಸಲು ವಿಫಲರಾಗಿರುವ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಯಾಗಬೇಕು. ಗುಂಪು ಹಿಂಸಾ ಹತ್ಯೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ವಿಶೇಷ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ನಾಯಕ ಫೈರೋಜ್ ಪಾಷಾ, ಪಿ.ಎಫ್.ಐ ಮುಖಂಡ ಸೂಫಿ, ಹಾಸನ ಮುಸ್ಲಿಮ್ ಮತ್ತು ಸರ್ವ ಧರ್ಮಗಳ ಹಿತರಕ್ಷಣಾ ವೇದಿಕೆಯ ಅನ್ಸಾರ್, ಅಲಿಮನ್ ಅಧ್ಯಕ್ಷ ತಾಜ್, ಸಮಾಜ ಸೇವಕ ಅಮ್ಜಾದ್ ಖಾನ್, ಅಝಂಖಾನ್, ನಾಸೀರ್ ಹಝ್ರತ್, ಅಸ್ಲಮ್ ಹಝ್ರತ್, ಅಮೀರ್ ಜಾನ್, ಝುಬೈರ್, ಧರ್ವೇಶ್, ಹೆತ್ತೂರು ನಾಗರಾಜು, ನವೀನ್, ಜಿ.ಓ. ಮಹಾಂತಪ್ಪ, ಸೂಫಿ ಅಹಮದ್, ನಾಸಿರ್ ಹುಸೇನ್ ಸೇರಿ ಅನೇಕರು ಹಾಜರಿದ್ದರು.