ಆರ್‌ಟಿಐ ಕಾರ್ಯಕರ್ತನ ಹತ್ಯೆ: ಮಾಜಿ ಬಿಜೆಪಿ ಸಂಸದ ಸಹಿತ 7 ಮಂದಿ ದೋಷಿಗಳು

Update: 2019-07-06 15:19 GMT

 ಅಹ್ಮದಾಬಾದ್,ಜು.6: ಆರ್‌ಟಿಐ ಕಾರ್ಯಕರ್ತ ಅಮಿತ್ ಜೇಥ್ವಾ ಅವರ ಹತ್ಯೆ ಪ್ರಕರಣದಲ್ಲಿ ಮಾಜಿ ಬಿಜೆಪಿ ಸಂಸದ ದಿನು ಸೋಳಂಕಿ ಮತ್ತು ಇತರ ಆರು ಜನರು ದೋಷಿಗಳೆಂದು ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಶನಿವಾರ ಘೋಷಿಸಿದೆ.

ಆರ್‌ಟಿಐ ಅರ್ಜಿಗಳ ಮೂಲಕ ಏಷಿಯಾಟಿಕ್ ಸಿಂಹಗಳ ವಾಸಸ್ಥಳವಾಗಿರುವ ಗಿರ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದ ಜೇಥ್ವಾ ಅವರನ್ನು 2010,ಜು.20ರಂದು ಗುಜರಾತ್ ಉಚ್ಚ ನ್ಯಾಯಾಲಯದ ಹೊರಗೆ ಗುಂಡಿಟ್ಟು ಹತ್ಯೆಗೈಯಲಾಗಿತ್ತು. ಅಕ್ರಮ ಗಣಿಗಾರಿಕೆಯ ವಿರುದ್ಧ ಅವರು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.

 ವಿಶೇಷ ಸಿಬಿಐ ನ್ಯಾಯಾಧೀಶ ಕೆ.ಎಂ ದವೆ ಅವರು ಜು.11ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ. ಗುಜರಾತ ಅಪರಾಧ ಪತ್ತೆ ದಳವು ಸೋಳಂಕಿಗೆ ಕ್ಲೀನ್ ಚಿಟ್ ನೀಡಿದ ಬಳಿಕ ಗುಜರಾತ್ ಉಚ್ಚ ನ್ಯಾಯಾಲಯವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ಸೋಳಂಕಿ 2009-2014ರ ಅವಧಿಯಲ್ಲಿ ಜುನಾಗಡ ಸಂಸದರಾಗಿದ್ದರು.

ಸೋಳಂಕಿಯವರ ಸೋದರ ಸಂಬಂಧಿ ಶಿವ ಸೋಳಂಕಿ, ಶೈಲೇಶ ಪಾಂಡ್ಯ, ಬಹಾದುರ ಸಿನ್ಹ ವಧೇರ್, ಪಂಚನ್‌ದೇಸಾಯಿ, ಸಂಜಯ ಚೌಹಾಣ ಮತ್ತು ಉಡಾಜಿ ಥಾಕೂರ್ ಅವರು ನ್ಯಾಯಾಲಯದಿಂದ ದೋಷಿಗಳೆಂದು ಘೋಷಿಸಲ್ಪಟ್ಟ ಇತರ ಆರೋಪಿಗಳಾಗಿದ್ದಾರೆ.

ಆರೋಪಿಗಳ ಒತ್ತಡ ಮತ್ತು ಬೆದರಿಕೆಗಳಿಂದಾಗಿ ಪ್ರಕರಣದಲ್ಲಿಯ 105 ಸಾಕ್ಷಿಗಳು ಪ್ರತಿಕೂಲ ಸಾಕ್ಷ ನೀಡಿದ್ದಾರೆ ಎಂದು ಜೇಥ್ವಾರ ತಂದೆ ಭಿಖಾಭಾಯಿ ಜೇಥ್ವಾ ಅವರು ದೂರಿಕೊಂಡ ಬಳಿಕ ಗುಜರಾತ್ ಉಚ್ಚ ನ್ಯಾಯಾಲಯವು ಹೊಸದಾಗಿ ವಿಚಾರಣೆಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News