ಮಂಡ್ಯ: ಅಲ್ಪಸಂಖ್ಯಾತ, ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Update: 2019-07-06 17:18 GMT

ಮಂಡ್ಯ, ಜು.6: ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಮುಸ್ಲಿಂ ಹಾಗೂ ದಲಿತರ ಸರಣಿ ಹತ್ಯೆ ನಡೆಯುತ್ತಿದ್ದರೂ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೌನವಾಗಿವೆ ಎಂದು ಅವರು ಕಿಡಿಕಾರಿದರು.

ದೇಶದಲ್ಲಿ ಮುಸ್ಲಿಂ ಯುವಕರು ಮತ್ತು ದಲಿತರ ಹತ್ಯೆ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಮತಾಂಧ ಯುವಕರ ಗುಂಪು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿರುವುದು ವಿಶ್ವಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದೆ ಎಂದರು.

ಈಗಲಾದರೂ ಎಚ್ಚೆತ್ತುಕೊಂಡು ಗುಂಪು ಹತ್ಯೆ ಮಾಡುವವರ ವಿರುದ್ಧ ಕಠಿಣ ಕಾಯ್ದೆ ತರಬೇಕು. ಮುಸ್ಲಿಂ, ದಲಿತ ಸಮುದಾಯದಲ್ಲಿ ಆತ್ಮವಿಶ್ವಾಸ ಬೆಳೆಸುವ ಕೆಲಸ ಮಾಡಬೇಕು. ಧರ್ಮಾಧಾರಿತ ತಾರತಮ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಾನೂನು ರೂಪಿಸಬೇಕು. ಕೊಲೆಯಾದ ವ್ಯಕ್ತಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಫ್ತಿ ರಿಝ್ವಾನ್, ಅಮ್ಜದ್, ಆಶ್ರಫ್, ದೇವನೂರು ಪುಟ್ಟನಂಜಯ್ಯ, ಝಾಕೀರ್, ನಯೀಮ್, ಮುಜಾಹಿದ್ ಅಲಿಖಾನ್, ತನ್ವಿರ್, ತಾಹೇರ್, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News