ಮಾಧ್ಯಮಗಳಲ್ಲಿ ಸಾಮಾಜಿಕ ಕಳಕಳಿ ಇಲ್ಲದಂತಾಗಿದೆ: ಪತ್ರಕರ್ತ ಸುಗತ ಶ್ರೀನಿವಾಸರಾಜು

Update: 2019-07-06 17:32 GMT

ಮೈಸೂರು,ಜು.6: ಇಂದಿನ ಮಾಧ್ಯಮಗಳಲ್ಲಿ ಸಾಮಾಜಿ ಕಳಕಳಿ ಮತ್ತು ಜವಾಬ್ದಾರಿ ಇಲ್ಲದಂತಾಗಿದೆ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಬೇಸರ ವ್ಯಕ್ತಪಡಿಸಿದರು.

ನಗರದ ಜೆ.ಪಿ.ನಗರ ಸಮೀಪದ ಗೆಜ್ಜಗಳ್ಳಿಯಲ್ಲಿರವ ಒಡನಾಡಿ ಬಾಲಕರ ಪುನರ್ವಸತಿ ಕೇಂದ್ರದಲ್ಲಿ ಶನಿವಾರ ಹಿರಿಯ ಪತ್ರಕರ್ತರ ದಿ.ರಾಜಶೇಖರ ಕೋಟಿ ಅವರ ಸ್ಮರಣಾರ್ಥ ಪುತ್ಥಳಿ ಸ್ಥಾಪನೆ ಹಾಗೂ ಸರಳ ವಿವಾಹ ಸಭಾಂಗಣ 'ಜೀವ ಸಂಗಮ'ದ ಉದ್ಘಾನೆ ಮತ್ತು 'ಪತ್ರಿಕಾ ಮಾಧ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳಿಗೆ ಸಾಮಾಜಿ ಕಳಕಳಿ ಮತ್ತು ಜವಾಬ್ದಾರಿಯೇ ಇಲ್ಲದಂತಾಗಿದೆ. ಇಂದು ಪತ್ರಿಕೆಗಳು ಕಾರ್ಪೋರೇಟ್ ಸಂಸ್ಥೆಗಳಾಗಿ ಪರಿವರ್ತನೆಗೊಂಡಿವೆ. ದೇಶದ ಪ್ರತಿಯೊಂದು ಪತ್ರಿಕೆಗಳು ಮತ್ತು ಮಾಧ್ಯಮಗಳು ತಮ್ಮದೇ ಆದ ಉದ್ದೇಶವನ್ನು ಹೊಂದಿವೆ. ಮಾಧ್ಯಮಗಳನ್ನು ಮೂರು ರೀತಿಯಲ್ಲಿ ನಿಯಂತ್ರಣ ಮಾಡಲಾಗುತ್ತದೆ. ಒಂದು ವಾಣಿಜ್ಯ, ಕೈಗಾರಿಕೆ, ಮೈನಿಂಗ್, ಲಿಕ್ಕರ್, ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಮಾಫಿಯಾ ನಡೆಸುವವರು ತಮ್ಮ ತಪ್ಪುಗಳನ್ನು ಮಚ್ಚಿಕೊಳ್ಳಲು ಮತ್ತು ಅಪರಾಧಗಳನ್ನು ಮರೆಮಾಚಲು ಮಾಧ್ಯಮಗಳನ್ನು ನಡೆಸುತ್ತಿದ್ದಾರೆ. ಇನ್ನು ರಾಜಕಾರಣಿಗಳು ತಾವು ಮೇಲೆ ಬರಬೇಕು ಎಂಬ ಉದ್ದೇಶದಿಂದ ಪತ್ರಿಕೆಗಳನ್ನು ನಡೆಸುತ್ತಿದ್ದಾರೆ. ಮತ್ತು, ಜಾಹೀರಾತಿನ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡಿರುವವರೂ ಇದ್ದಾರೆ. ಹೀಗಿದ್ದ ಮೇಲೆ ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿ ಎಲ್ಲಿದೆ ಎಂದು ಪ್ರಶ್ನಿಸಿದರು.

ನಾವು ಪತ್ರಿಕೆಗಳನ್ನು ಏಕೆ ಓದಬೇಕು ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ದೇಶದ ಬಹುತೇಕ ಪತ್ರಿಕೆಗಳು ಸತ್ಯವನ್ನು ತೋರಿಸದೆ ಬರೀ ಸುಳ್ಳನ್ನೆ ವಿಜೃಂಭಿಸುತ್ತಿವೆ. ಆ ಪತ್ರಿಕೆಗಳನ್ನು 5 ರೂ. ಕೊಟ್ಟು ಓದಬೇಕಿದೆ. ರಪೇಲ್, ನೋಟ್ ಬ್ಯಾನ್, ಪುಲ್ವಾಮ, ಕಾಶ್ಮೀರ ಸಮಸ್ಯೆ  ಸೇರಿದಂತೆ ಹಲವಾರು ಸತ್ಯಗಳನ್ನು ಮರೆಮಾಚಿದ ಮಾಧ್ಯಮಗಳು ಮತ್ತು ಪತ್ರಿಕೆಗಳನ್ನು ಏಕೆ ಕೊಂಡುಕೊಂಡು ಓದಬೇಕು ಎಂದರು.

ದೇಶದ ಬಹುತೇಕ ಮಾಧ್ಯಮಗಳು ಬಿಜೆಪಿಯ ಹಿಡಿತದಲ್ಲಿವೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಲೋಚನೆ ಎಂಬುದೇ ಇಲ್ಲ, ಹಾಗಾಗಿ ಅವರು ಚುನಾವಣೆಯಲ್ಲಿ ಸೋಲಬೇಕಾಯಿತು. ಕಾಂಗ್ರೆಸ್ ಪಕ್ಷದ ನಾಯಕರಿಗೆ ಚುನಾವಣೆಯಲ್ಲಿ ಸೋತಿದ್ದರ ಬಗ್ಗೆ ಪ್ರಶ್ನಿಸಿದರೆ, ಈ ಬಾರಿ ಸೋಲಾಗಿದೆ ಮುಂದಿನ ಚುನಾವಣೆಯಲ್ಲಿ ನಾವೆ ಗೆಲ್ಲುತ್ತೇವೆ ಎನ್ನುತ್ತಾರೆ. ಮತ್ತೊಂದು ಚುನಾವಣೆಯಲ್ಲಿ ಸೋಲುಂಟುದಾರೆ ಮುಂದೆ ಗೆಲ್ಲುತ್ತೇವೆ ಎನ್ನುತ್ತಾರೆ. ಮತ್ತೊಮ್ಮೆ ಸೋತರೆ ನಾವು ಬಿಜೆಪಿ ಹೋಗುತ್ತೇವೆ ಎನ್ನುವ ಸ್ಥಿತಿ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ ಎಂದು ಹರಿಹಾಯ್ದರು.

ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ನಿಬಾಯಿಸಿದರೆ, ಡೆಸ್ಕ್ ರೂಮ್ ನಲ್ಲಿ ಕುಳಿತವರು ತಮಗೆ ಬೇಕಾದ ರೀತಿಯಲ್ಲಿ ತಲೆಬರಹವನ್ನು ನೀಡುತ್ತಾರೆ. ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಎಷ್ಟು ಜನ ದಲಿತರು ಹಿಂದುಳಿದವರು ಮುಖ್ಯ ಸ್ಥಾನದಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಮಾಧ್ಯಮ ಮತ್ತು ಪತ್ರಿಕೆ ಯಾವುದೋ ಒಂದು ವರ್ಗದ ಹಿಡಿತದಲ್ಲಿದೆ. ನಾವು ಎಷ್ಟೇ ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯಾಗಿ ಕೆಲಸ ಮಾಡಿದರೂ ಆ ವ್ಯವಸ್ಥೆಗಳು ನಮ್ಮನ್ನು ಬಿಡುವುದಿಲ್ಲ. ಪತ್ರಿಕೆಗಳು ಉದ್ಯೋಗಗಳಾಬೇಕೇ ಹೊರತು ಉಧ್ಯಮಗಳಾಗಬಾರದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರೊ.ಜಿ.ಎಚ್.ನಾಯಕ್ ವಹಿಸಿದ್ದರು. ದಿ.ರಾಜಶೇಖರ ಕೋಟಿ ಅವರ ಪುತ್ಥಳಿಯನ್ನು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಶಾಸಕ ಎಸ್.ಎ.ರಾಮದಾಸ್, ಮಾಜಿ ಶಾಸಕ ವಾಸು, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರುಶು, ರಾಜಶೇಖರ ಕೋಟಿ ಅವರ ಪುತ್ರಿ ರಶ್ಮಿಕೋಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರ ಪತ್ನಿ ನಿರ್ಮಲಾ ಕೋಟಿ, ಪುತ್ರ ರವಿ ಕೋಟಿ, ಹಿರಿಯ ಸಾಹಿತಗಳಾದ ಪ್ರೊ.ಕೆ.ಎಸ್.ಭಗವಾನ್, ಕಾಳಚನ್ನೇಗೌಡ, ಎಂ.ಜಿ.ಆರ್.ಅರಸ್, ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಗುಬ್ಬಿಗೋಡು ರಮೇಶ್, ಬನ್ನೂರು ಕೆ.ರಾಜು, ಪಂಡಿತಾರಾಧ್ಯ, ಮೀರಾ ನಾಯಕ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ.ಪುಷ್ಪಾ ಅಮರ್‍ನಾಥ್, ಕಾಂಗ್ರೆಸ್ ಮುಖಂಡರಾದ ಶಿವಪ್ರಕಾಶ್, ಮಲ್ಲಿಗೆ ವೀರೇಶ್, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ದಸಂಸ ಮುಖಂಡರಾದ ಆಲಗೋಡು ಶಿವಕುಮಾರ್, ಮಲ್ಲಹಳ್ಳಿನಾರಾಯಣ, ಪ್ರಗತಿಪರ ಚಿಂತಕರಾದ ಗೋವಿಂದರಾಜು, ಓಂಕಾರ್, ಬಾದಲ್ ನಂಜುಂಡಸ್ವಾಮಿ, ದಿ.ರಾಜಶೇಖರ ಕುಟುಂಬದವರು ಸೇರಿದಂತೆ ಹಲವಾರ ಅಭಿಮಾನಿಗಳು ಹಿತೈಷಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News