ಪರಿಸರ ಉಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ: ಎನ್‌ಸಿಎಫ್ ಮುಖ್ಯಸ್ಥ ಸಂಜಯ್‌ ಗುಬ್ಬಿ

Update: 2019-07-06 17:46 GMT

ಹನೂರು, ಜು.6: ವನ್ಯ ಜೀವಿಗಳು, ಅರಣ್ಯಗಳು ಸೇರಿದಂತೆ ಒಟ್ಟಾರೆ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸಾರ್ವಜನಿಕರಿಗೆ ಪರಿಸರದ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕಿರುವ ನಿಟ್ಟಿನಲ್ಲಿ ಕಳೆದ ಕಳೆದ ವರ್ಷದಿಂದ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಹೊಳೆಮತ್ತಿ ನೇಚರ್‌ ಕನ್ಸರ್ವೇಶನ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ, ಎನ್‌ಸಿಎಫ್ ಮುಖ್ಯಸ್ಥ ಸಂಜಯ್‌ ಗುಬ್ಬಿ ತಿಳಿಸಿದರು.

ಹನೂರು ಸಮೀಪದ ಎಲ್ಲೆಮಾಳ ಗ್ರಾಮದ ಬಳಿ ನೇಚರ್‌ ಕನ್ಸರ್ವೇಶನ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಸ್ಥಾಪಿಸಲಾಗಿರುವ ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನೇಕ ಪ್ರವಾಸಿಗರು, ವಿವಿಧ ಶಾಲೆಯ ಶಿಕ್ಷಕರು ಮಕ್ಕಳು, ಹಾಗೂ ಪರಿಸರ ಪ್ರೇಮಿಗಳು ಈ ಮಾಹಿತಿ ಕೇಂದ್ರಕ್ಕೆ ವರ್ಷದಿಂದೀಚೆಗೆ ಸತತವಾಗಿ ಭೇಟಿ ನೀಡುತ್ತಿದ್ದಾರೆ. ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರದಲ್ಲಿ ಮಲೆಮಹದೇಶ್ವರ ವನ್ಯಜೀವಿ ವಲಯ ಹಾಗೂ ಕಾವೇರಿ ವನ್ಯಜೀವಿ ವಲಯದ ಅರಣ್ಯ ಮತ್ತು ಇತರೆ ವನ್ಯಜೀವಿಗಳ ಮಾಹಿತಿಯನ್ನು ಒಳಗೊಂಡಿದೆ ಎಂದು ತಿಳಿಸಿದರು. 

ಅಲ್ಲದೆ ಸ್ಥಳಿಯ ಸುತ್ತಮುತ್ತಲಿನಲ್ಲಿ ವಾಸಿಸುವ ಗ್ರಾಮದ ಜನತೆಗೆ ಅನುಕೂಲವಾಗುಂತೆ 1500 ಕುಟುಂಬಗಳಿಗೆ ಈ ಸಂಸ್ಥೆಯ ಮುಖಾಂತರ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ. ಅದೇ ರೀತಿ ಅರಣ್ಯವನ್ನು ನಾಶಗೊಳಿಸದೇ ಸಂರಕ್ಷಿಸುವ ನಿಟ್ಟಿನಲ್ಲಿ ಕಾಡನ್ನು ನಾಶ ಮಾಡುವುದಿಲ್ಲ, ಪ್ರಾಣಿಗಳಿಗೆ ಯಾವುದೆ ರೀತಿಯ ತೊಂದರೆ ನೀಡುವುದಿಲ್ಲ ಎಂದು ಒಪ್ಪಂದ ಪತ್ರವನ್ನು ಪಡೆದಿದ್ದೇವೆ. ಹೊಳೆಮತ್ತಿ ಪ್ರಕೃತಿ ಮಾಹಿತಿ ಕೇಂದ್ರ ಒಂದು ವರ್ಷದಲ್ಲೆ ಈ ಭಾಗದಲ್ಲಿ ಸಾಕಷ್ಟು  ಜನಪ್ರಿಯ ಗಳಿಸಿದೆ ಎಂದರು

ನಂತರ ಮಾತನಾಡಿದ ಡಿಎಫ್‌ಒ ಏಡುಕುಂಡಲು, ನೇಚರ್‌ ಕನ್ಸರ್ವೇಶನ್ ಫೌಂಡೇಶನ್ ಸಂಸ್ಥೆಯ ಪರಿಸರ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯ ಅನನ್ಯವಾದದ್ದು, ಸಂಸ್ಥೆಯು ವನ್ಯಜೀವಿ ಮತ್ತು ಕಾಡನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಇದೇ ರೀತಿ ಸಂಸ್ಥೆಯು ಉತ್ತಮ ಕಾರ್ಯಗಳನ್ನು ಕೈಗೊಂಡು ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಲಿ ಎಂದು ಹಾರೈಸಿದರು.

ಹೊಳೆಮತ್ತಿ  ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಚರ್ಚಾ ಸ್ವರ್ಧೆ, ಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಕಾವೇರಿ ವನ್ಯಜೀವಿ ವಲಯದ ಡಿಎಫ್‌ಒ ಡಾ.ರಮೇಶ್‌ ಕುಮಾರ್, ಎಸಿಎಫ್ ಅಂಕರಾಜು, ಅರಣ್ಯಾಧಿಕಾರಿಗಳಾದ ಮುತ್ತೆಗೌಡ, ವನಿತಾ, ರಾಜೇಶ್‌ ಗವಾಲ್, ಮನ್ಸೂರ್, ವಿನಯ್‌ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ರಾಧ, ಸೋಲಿಗ ಸಂಘದ ಅಧ್ಯಕ್ಷ ದೊಡ್ಡಯ್ಯ, ನೇಚರ್ ಕನ್ಸರ್ವೇಶನ್ ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News