8 ಶಾಸಕರ ರಾಜೀನಾಮೆ ಕ್ರಮ ಬದ್ಧವಾಗಿಲ್ಲ: ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಜು 9: ರಾಜೀನಾಮೆ ನೀಡಿರುವ 13 ಮಂದಿ ಶಾಸಕರ ಪೈಕಿ ಐದು ಮಂದಿ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿದ್ದು, ಉಳಿದ 8 ಮಂದಿ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಮೊದಲ ಮಹಡಿಯಲ್ಲಿನ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಮಬದ್ಧವಾಗಿ ರಾಜೀನಾಮೆ ನೀಡಿರುವ ಮಸ್ಕಿ ಕ್ಷೇತ್ರದ ಪ್ರತಾಪ್‌ಗೌಡ ಪಾಟೀಲ್, ವಿಜಯನಗರದ ಆನಂದ್ ಸಿಂಗ್, ಮಹಾಲಕ್ಷ್ಮಿ ಲೇಔಟ್‌ನ ಕೆ.ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣ ಗೌಡ, ಬಿಟಿಎಂ ಲೇಔಟ್‌ನ ರಾಮಲಿಂಗಾರೆಡ್ಡಿ ಅವರಿಗೆ ವಿವರಣೆ ನೀಡಲು ಕೋರಿ ದಿನಾಂಕ ನಿಗದಿಪಡಿಸಲಾಗಿದೆ ಎಂದರು.
ಜು.12ಕ್ಕೆ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು, ಅದೇ ದಿನ ಮಧ್ಯಾಹ್ನ 3 ಗಂಟೆ ಬಳಿಕ ಪ್ರತಾಪ್ ಗೌಡ ಪಾಟೀಲ್, ಆನಂದ್‌ಸಿಂಗ್ ಮತ್ತು ನಾರಾಯಣಗೌಡ ಅವರಿಗೆ ವಿವರಣೆ ನೀಡಲು ನೋಟಿಸ್ ನೀಡಲಾಗುವುದು. ಜು.13 ಮತ್ತು 14 ಸರಕಾರಿ ರಜೆ. ಹೀಗಾಗಿ ಜು.15ರಂದು ರಾಮಲಿಂಗಾರೆಡ್ಡಿ ಮತ್ತು ಕೆ.ಗೋಪಾಲಯ್ಯ ಅವರಿಗೆ ಸಮಯ ನೀಡಲಾಗಿದೆ ಎಂದರು.
ನಾನು ವಿಳಂಬ ನೀತಿ ಅನುಸರಿಸುತ್ತಿಲ್ಲ. ಬದಲಿಗೆ ಯಾವುದೇ ಸಮಯ ವ್ಯರ್ಥ ಮಾಡದೆ, ಶಾಸಕರಿಗೆ ನೋಟಿಸ್ ತಲುಪಿಸುವ ಕಾರಣಕ್ಕೆ ಎರಡು ದಿನ ಕಾಲಾವಕಾಶ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದ ಅವರು, ಉಳಿದ 8 ಶಾಸಕರು ನಿಯಮಾವಳಿ ಅನ್ವಯ ಕ್ರಮಬದ್ಧ ರೂಪದಲ್ಲಿ ರಾಜೀನಾಮೆ ಸಲ್ಲಿಸಲು ತಿಳಿವಳಿಕೆ ನೀಡಲಾಗುವುದು ಎಂದು ಹೇಳಿದರು.
ನಾನು ಅತ್ಯಂತ ಪಾರದರ್ಶಕವಾಗಿ, ಸಂವಿಧಾನ ಮತ್ತು ವಿಧಾನಸಭೆ ನಿಯಮಾವಳಿ ಅನ್ವಯ ರಾಜೀನಾಮೆ ಬಗ್ಗೆ ಕ್ರಮ ಕೈಗೊಳ್ಳಲಿದ್ದೇನೆ. ಬಡವರು, ಕಾರ್ಮಿಕರು, ಬೀದಿ ವ್ಯಾಪಾರಿಗಳು ದೂರು ನೀಡಿದ್ದಾರೆ. ಶಾಸಕರು ಯಾವ ಪುರುಷಾರ್ಥಕ್ಕೆ ರಾಜೀನಾಮೆ ನೀಡಿದ್ದಾರೆ, ಜನರ ತೆರಿಗೆ ಹಣ ಚುನಾವಣೆಗಳಿಗೆ ವೆಚ್ಚವಾಗುತ್ತದೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದೆ. ಹೀಗಾಗಿ ಶಾಸಕರ ರಾಜೀನಾಮೆ ಅಂಗೀಕರಿಸಬೇಡಿ ಎಂದು ಕೋರಿದ್ದಾರೆ. ಅಲ್ಲದೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಮತ್ತಿತರರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದು, ಈ ಬಗ್ಗೆ ಶಾಸಕರ ವಿಚಾರಣೆ ನಡೆಸುತ್ತೇನೆ ಎಂದರು.
ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಶಾಸಕರು ರಾಜ್ಯಪಾಲರಿಗೂ ಮಾಹಿತಿ ನೀಡಿದ್ದು, ರಾಜ್ಯಪಾಲರು ಈ ಬಗ್ಗೆ ಪರಿಶೀಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ಏತನ್ಮಧ್ಯೆ ತಾನು ಸ್ಪೀಕರ್ ಆಗಿ ತಾವು ‘ಸಂವಿಧಾನದ ವೌಲ್ಯವನ್ನು ಎತ್ತಿ ಹಿಡಿಯುತ್ತೀರಿ ಎಂಬ ವಿಶ್ವಾಸ ಇದೆ’ ಎಂದು ಅವರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ರಾಜ್ಯಪಾಲರಿಗೆ ನಾನು ಪತ್ರ ಬರೆದಿದ್ದು, ಸಂವಿಧಾನ ಎತ್ತಿ ಹಿಡಿಯುವುದರ ಜತೆಗೆ ರಾಜ್ಯದ ಅಸಹಾಯಕ ಜನರ ಭಾವನೆಗಳಿಗೆ ಚ್ಯುತಿಯಾಗದ ರೀತಿ ಕರ್ತವ್ಯ ನಿರ್ವಹಿಸುತ್ತೇನೆಂಬ ಭರವಸೆ ನೀಡುತ್ತೇನೆ ಎಂದ ಅವರು, ಶಾಸಕರು ಖುದ್ದು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ರಮೇಶ್ ಕುಮಾರ್ ವಿವರಿಸಿದರು.
‘ಪಕ್ಷೇತರ ಶಾಸಕ ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ತನ್ನ ಬೆಂಬಲ ಬಿಜೆಪಿಗೆ ಎಂದು ತಿಳಿಸಿರುವ ಬಗ್ಗೆ ರಾಜ್ಯಪಾಲರು ನನಗೆ ಮಾಹಿತಿ ನೀಡಿದ್ದಾರೆ. ಆದರೆ, ಇದಕ್ಕೂ ನನಗೂ ಸಂಬಂಧವಿಲ್ಲ. ಸಚಿವರ ರಾಜೀನಾಮೆಯನ್ನು ಸಿಎಂ ಒಪ್ಪಿಕೊಳ್ಳಬೇಕು’
-ಕೆ.ಆರ್.ರಮೇಶ್‌ಕುಮಾರ್, ವಿಧಾನಸಭೆ ಸ್ಪೀಕರ್
ರಾಜೀನಾಮೆ ನೀಡಿರುವ ಶಾಸಕರು
ಎಚ್.ವಿಶ್ವನಾಥ್(ಹುಣಸೂರು), ಕೆ.ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣಗೌಡ(ಕೆ.ಆರ್.ಪೇಟೆ), ರಾಮಲಿಂಗಾರೆಡ್ಡಿ(ಬಿಟಿಎಂ ಲೇಔಟ್), ರಮೇಶ್ ಜಾರಕಿಹೊಳಿ(ಗೋಕಾಕ್), ಎಸ್.ಟಿ.ಸೋಮಶೇಖರ್(ಯಶವಂತಪುರ), ಪ್ರತಾಪ್ ಗೌಡ ಪಾಟೀಲ್(ಮಸ್ಕಿ), ಬಿ.ಸಿ.ಪಾಟೀಲ್(ಹಿರೇಕೆರೂರು), ಮಹೇಶ್ ಕುಮಟಳ್ಳಿ (ಅಥಣಿ), ಬೈರತಿ ಬಸವರಾಜ್(ಕೆ.ಆರ್.ಪುರಂ), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಮುನಿರತ್ನ(ರಾಜರಾಜೇಶ್ವರಿ ನಗರ), ಆರ್.ರೋಷನ್ ಬೇಗ್ (ಶಿವಾಜಿನಗರ).