ರಾಜೀನಾಮೆ ನೀಡಿದ್ದು ಶಾಸಕ ಸ್ಥಾನಕ್ಕೆ ಮಾತ್ರ, ಕಾಂಗ್ರೆಸ್ ಪಕ್ಷಕ್ಕಲ್ಲ: ಶಾಸಕ ಎಸ್.ಟಿ.ಸೋಮಶೇಖರ್

Update: 2019-07-09 12:30 GMT

ಬೆಂಗಳೂರು, ಜು.8: ಬೇರೆ ಬೇರೆ ಪಕ್ಷದಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದು ಸಚಿವರು, ಮುಖ್ಯಮಂತ್ರಿ ಆಗಿದ್ದಾರೆ. ಆಗ ಇಲ್ಲದಿದ್ದ ನಿಯಮಗಳು ಈಗ ಯಾಕೆ ನಮ್ಮ ಮೇಲೆ ಅನ್ವಯವಾಗುತ್ತವೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವ ಸಂದರ್ಭದಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಆ ರೀತಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಈ ಸರಕಾರದಲ್ಲಿಯೂ ಸಚಿವರಾಗಿದ್ದಾರೆ ಎಂದು ಕಿಡಿಗಾರಿದರು.

ನಾವು ಶಾಸಕಾಂಗ ಪಕ್ಷದ ಸಭೆಗಳಿಗೆ ಗೈರು ಆಗಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ, ವಿಪ್ ಉಲ್ಲಂಘನೆ ಮಾಡಿಲ್ಲ, ಸದನದಿಂದಲೂ ಗೈರು ಹಾಜರಾಗಿಲ್ಲ. ನಮಗೆ ಆಗಿರುವ ಮಾನಸಿಕ ಹಿಂಸೆಯಿಂದ ಬೇಸತ್ತು, ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ. ಯಾವುದೇ ಒತ್ತಡ ಇಲ್ಲ, ಆಸೆ, ಆಮಿಷಗಳಿಗೆ ನಾವು ಬಲಿಯಾಗಿಲ್ಲ ಎಂದು ಸೋಮಶೇಖರ್ ಹೇಳಿದರು.

ನಮ್ಮನ್ನು ಗನ್ ಪಾಯಿಂಟ್ ಮೇಲೆ ಇಟ್ಟು ಹೆದರಿಸುವ ಧೈರ್ಯ ಯಾರಿಗೂ ಇಲ್ಲ. ನಾವೇನು ಭೂಗತ ಲೋಕದವರೇ? ಇಲ್ಲ ಭೂ ಮಾಫಿಯಾದವರೇ? ನಾವು ಸಾಮಾನ್ಯ ಕಾರ್ಯಕರ್ತರು. ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಗೆ ಪಕ್ಷಕ್ಕೆ ಗೌರವ ತರುವ ಕೆಲಸ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯಗೆ ಈವರೆಗೆ ಗೌರವ ಕೊಟ್ಟಿದ್ದೇವೆ. ಅವರು ಮುಖ್ಯಮಂತ್ರಿ ಆಗುವುದರಲ್ಲಿ ನಮ್ಮ ಪಾತ್ರವೂ ಇದೆ. ಆಗ ಇದು ನಿಮಗೆ ಪಕ್ಷ ವಿರೋಧಿ ಚಟುವಟಿಕೆ ಆಗಿರಲಿಲ್ಲವೇ? ಕಾನೂನು ನಮಗೂ ಗೊತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ನಾವು ಯಾರೂ ರಾಜೀನಾಮೆ ಕೊಟ್ಟಿಲ್ಲ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ ಎಂದು ಸೋಮಶೇಖರ್ ಹೇಳಿದರು. ಐಟಿ, ಈಡಿ ಮುಖಾಂತರ ಆಗುತ್ತಿರುವ ಟಾರ್ಗೆಟ್‌ಗಳಿಂದ ಡಿ.ಕೆ.ಶಿವಕುಮಾರ್ ಪಾರಾಗಲಿ, ನಮ್ಮನ್ನು ಟಾರ್ಗೆಟ್ ಮಾಡುವುದು ಬೇಡ. ರಾಜೀನಾಮೆ ನಿರ್ಧಾರವನ್ನು ಏಕಾಏಕಿ ತೆಗೆದುಕೊಂಡಿಲ್ಲ ಎಂದರು. 

ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಭೈರತಿ ಬಸವರಾಜ್ ಮಾತನಾಡಿ, ನಾವು ಯಾರೂ ಇಲ್ಲಿ ಆಟ ಆಡಲು ಬಂದಿಲ್ಲ. ಶಾಸಕ ಸ್ಥಾನಕ್ಕೆ ನಾವು ಸಲ್ಲಿಸಿರುವ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ರಾಜಕಾರಣ ಇಲ್ಲದಿದ್ದರೂ ಪರವಾಗಿಲ್ಲ, ನಮಗೂ ಕುಟುಂಬ, ಸಂಸಾರವಿದೆ, ನೆಮ್ಮದಿಯಿಂದ ಮನೆಯಲ್ಲಿರುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ 30 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬರುವ ಮೊದಲೇ ನಾನು ಪಕ್ಷದಲ್ಲಿದ್ದೆ. ನಾವು ಯಾಕೆ ಕುದುರೆ ವ್ಯಾಪಾರಕ್ಕೆ ಬಲಿಯಾಗಬೇಕು. 7 ಬಾರಿ ಗೆದ್ದಿರುವ ರಾಮಲಿಂಗಾರೆಡ್ಡಿ, ರೋಷನ್ ಬೇಗ್ ರಾಜೀನಾಮೆ ನೀಡಿದ್ದಾರೆ. ಅವರಿಗೆ ಎಷ್ಟು ನೋವಾಗಿರಬಹುದು. ನಮ್ಮನ್ನು ಯಾರು ಇಲ್ಲಿ ಬಂಧನದಲ್ಲಿಟ್ಟಿಲ್ಲ, ನಮ್ಮ ಸ್ವಂತ ಖರ್ಚಿನಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ಹಾಗಂತ ನಾನು ನನ್ನ ಸ್ವಾಭಿಮಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ನಾನು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ನನ್ನ ಮನಸ್ಸಿಗೆ ನೋವಾಗಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಬಸವರಾಜ್ ತಿಳಿಸಿದರು.

ಪಕ್ಷದಿಂದ ಅಮಾನತು ಮಾಡಿದರು ಅಷ್ಟೇ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೂ ಅಷ್ಟೇ. ನನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವುದೇ ಬೆದರಿಕೆಗಳಿಗೆ ಬಗ್ಗುವ ಜಾಯಮಾನ ನನ್ನದಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೋ ಶಾಸಕರ ಗೆಲುವಿಗೆ ಸಹಕಾರ ಮಾಡಿದ್ದೇನೆ ಎಂದು ಅವರು ಹೇಳಿದರು. ನಾನು ಏನೂ ಮಾಡದೇ ಇದ್ದಿದ್ದರೆ ಜನ ಎರಡು ಬಾರಿ ಸತತವಾಗಿ ನನ್ನನ್ನು ಯಾಕೆ ಆಯ್ಕೆ ಮಾಡುತ್ತಿದ್ದರು. ನನ್ನ ಕ್ಷೇತ್ರದ ಜನರನ್ನು ದೇವರೆಂದು ನಂಬಿದ್ದೇನೆ. ಅವರ ಕೆಲಸ ಮಾಡಿಕೊಡಲು ನನಗೆ ಸಾಧ್ಯವಾಗದಿದ್ದರೆ, ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗದಿದ್ದರೆ, ನಾನೇಕೆ ಶಾಸಕನಾಗಿರಬೇಕು ಎಂದು ಬಸವರಾಜ್ ಪ್ರಶ್ನಿಸಿದರು.

ಸ್ವ ಇಚ್ಛೆಯಿಂದ ನಾವು ರಾಜೀನಾಮೆ ನೀಡಿದ್ದೇವೆ. ನಮ್ಮ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ. ಅದನ್ನು ಎದುರಿಸಲು ನಾವೆಲ್ಲರೂ ಸಿದ್ಧರಿದ್ದೇವೆ. ನಾವು ಯಾರೂ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ. ಕಾನೂನು ಬದ್ಧವಾಗಿ ಸ್ಪೀಕರ್‌ಗೆ ರಾಜೀನಾಮೆ ನೀಡಿದ್ದೇವೆ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ರಾಜೀನಾಮೆ ನೀಡಿದ್ದೇನೆ.

-ಪ್ರತಾಪ್‌ಗೌಡ ಪಾಟೀಲ್, ಮಸ್ಕಿ ಶಾಸಕ

ಮೂರ್ನಾಲ್ಕು ತಿಂಗಳ ಹಿಂದೆಯೇ ನಾವು ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಡಿ.ಕೆ.ಶಿವಕುಮಾರ್‌ಗೆ ಹೇಳಿದ್ದೆವು. ನಾಲ್ಕು ತಿಂಗಳಿನಿಂದ ಯಾರೊಬ್ಬರೂ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ.

-ಎಸ್.ಟಿ.ಸೋಮಶೇಖರ್, ಬಿಡಿಎ ಅಧ್ಯಕ್ಷ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News