ರಾಜೀನಾಮೆ ನೀಡಿದ ಶಾಸಕರ ಸೇರ್ಪಡೆಗೆ ಬಿಜೆಪಿಯಲ್ಲಿ ತೀವ್ರ ವಿರೋಧ
ಬೆಂಗಳೂರು, ಜು. 9: ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೆ ಮುಂದಾಗಿರುವ ಕೆ.ಆರ್.ಪುರ ಕ್ಷೇತ್ರದ ಬೈರತಿ ಬಸವರಾಜು, ರಾಜರಾಜೇಶ್ವರಿ ನಗರ ಕ್ಷೇತ್ರದ ಮುನಿರತ್ನ, ಯಶವಂತಪುರದ ಸೋಮಶೇಖರ್ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಕೆ.ಗೋಪಾಲಯ್ಯ ವಿರುದ್ಧ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮೇಲ್ಕಂಡ ಕ್ಷೇತ್ರಗಳ ಬಿಜೆಪಿ ಮುಖಂಡರು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಖುದ್ದು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಈ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು. ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಮಾಜಿ ಶಾಸಕರಾದ ಸತೀಶ್ ರೆಡ್ಡಿ, ನೆ.ಲ.ನರೇಂದ್ರಬಾಬು ಸೇರಿದಂತೆ ಸ್ಥಳೀಯ ಬಿಬಿಎಂಪಿ ಸದಸ್ಯರು ಸೇರಿದಂತೆ ಮುಖಂಡರು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೇರ್ಪೆಡೆಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಒಂದು ವೇಳೆ ಆ ಮುಖಂಡರು ಪಕ್ಷಕ್ಕೆ ಬಂದರೆ ನಾವು ಪಕ್ಷ ತ್ಯಜಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆಂದು ಗೊತ್ತಾಗಿದೆ.
ಶಾಸಕರ ರಾಜೀನಾಮೆಯೇ ಇನ್ನೂ ಅಂಗೀಕಾರವಾಗಿಲ್ಲ. ಹೀಗಿರುವಾಗ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಹೀಗಾಗಿ ಪಕ್ಷದ ಮುಖಂಡರು ಸದ್ಯಕ್ಕೆ ಆ ಬಗ್ಗೆ ಆಲೋಚಿಸುವ ಅಗತ್ಯವಿಲ್ಲ ಎಂದು ಮುಖಂಡರು ಅವರನ್ನು ಸಮಾಧಾನಪಡಿಸಿದ್ದಾರೆಂದು ತಿಳಿದು ಬಂದಿದೆ.