ಶಿವಮೊಗ್ಗ: ಬೆಂಗಳೂರಿಗೆ ಶರಾವತಿ ನದಿ ನೀರು ಪೂರೈಕೆ ವಿರೋಧಿಸಿ ಪ್ರತಿಭಟನೆ

Update: 2019-07-09 16:34 GMT

ಶಿವಮೊಗ್ಗ, ಜು. 9: ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿ ನೀರು ಪೂರೈಸುವ ರಾಜ್ಯ ಸರ್ಕಾರದ ಪ್ರಸ್ತಾವಿತ ಯೋಜನೆ ವಿರೋಧಿಸಿ ಮಂಗಳವಾರ ವಿವಿಧ ಸಂಘಟನೆಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದವು. 

ರಾಜೇಂದ್ರ ನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ, ಸಹ್ಯಾದ್ರಿ ಸೌಹಾರ್ದ ಸಹಕಾರಿಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಜಂಗಮ ಸಂಘ ಹಾಗೂ ಸ್ವೇದಾ ಸಂಸ್ಥೆಯು ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದವು.

ಒತ್ತಾಯವೇನು?: ಲಿಂಗನಮಕ್ಕಿ ಡ್ಯಾಂನಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಯೋಜನೆಯು ಅವೈಜ್ಞಾನಿಕವಾಗಿದ್ದು, ಕಾರ್ಯಸಾಧುವಲ್ಲ. ಇದರಿಂದ ಸಾವಿರಾರು ಕೋಟಿ ರೂ. ವ್ಯರ್ಥವಾಗಲಿದೆ. ಹಾಗೆಯೇ ಮಲೆನಾಡಿನ ಪರಿಸರದ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ. ಅಪಾರ ಪ್ರಮಾಣದ ಅರಣ್ಯ ನಾಶವಾಗುವ ಸಾಧ್ಯತೆಯಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. 

ಪ್ರಸ್ತುತ ಮಲೆನಾಡು ಭಾಗದಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಇದರಿಂದ ಕೆರೆಕಟ್ಟೆ, ಜಲಾಶಯಗಳು ಭರ್ತಿಯಾಗದ ಸ್ಥಿತಿಯಿದೆ. ಇಂತಹ ಸ್ಥಿತಿಯಲ್ಲಿ ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಹರಿಸುವ ಸರ್ಕಾರದ ಯೋಜನೆಯು ಮಲೆನಾಡು ವಿರೋಧಿಯಾದುದಾಗಿದೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. 

ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ವೇಳೆ ಸಂತ್ರಸ್ತರಾದ ಸಾವಿರಾರು ಜನರಿಗೆ ಇಲ್ಲಿಯವರೆಗೂ ಸೂಕ್ತ ಪುನರ್ವಸತಿ ಸೌಲಭ್ಯ ದೊರಕಿಲ್ಲ. ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಮೊದಲು ರಾಜ್ಯ ಸರ್ಕಾರ ಸಂತ್ರಸ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. 

ಬೆಂಗಳೂರು ಅಸ್ತವ್ಯಸ್ತವಾಗಿ ಬೆಳೆಯುತ್ತಿದ್ದು, ಮೊದಲು ಬೆಳವಣಿಗೆಯ ಮೇಲೆ ನಿಯಂತ್ರಣ ಹಾಕಬೇಕು. ಪರ್ಯಾಯ ಮಾರ್ಗಗಳ ಮೂಲಕ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕ್ರಮಗಳತ್ತ ಸರ್ಕಾರ ಚಿತ್ತ ಹರಿಸಬೇಕು. ಯಾವುದೆ ಕಾರಣಕ್ಕೂ ಶರಾವತಿ ನದಿಯಿಂದ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳಿಸಬಾರದು ಎಂದು ಸಂಘಟನೆಗಳು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News