ರಾಜೀನಾಮೆ ನೀಡಿದ 'ಕೈ' ಶಾಸಕರ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ

Update: 2019-07-09 16:39 GMT

ಮಂಡ್ಯ, ಜು.9: ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಕಾವೇರಿ ಉದ್ಯಾನದ ಬಳಿ ಇರುವ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಶಾಸಕರ ರಾಜೀನಾಮೆ ನಡೆಯನ್ನು ತೀವ್ರವಾಗಿ ಖಂಡಿಸಿ ಕೂಡಲೇ ರಾಜೀನಾಮೆ ವಾಪಸ್ ಪಡೆಯಲು ಒತ್ತಾಯಿಸಿದರು.

ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಜತೆ ಸೇರಿ ಸರಕಾರ ರಚನೆ ಮಾಡಲಾಗಿದೆ. ಆದರೆ, ಶಾಸಕರು ಇದನ್ನು ಅರ್ಥಮಾಡಿಕೊಳ್ಳದೆ ರಾಜೀನಾಮೆ ನೀಡಿ ಬಿಕ್ಕಟ್ಟು ಸೃಷ್ಟಿಸಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಶಾಸಕರು ಅಧಿಕಾರಕ್ಕೆ ಅಂಟಿಕೊಳ್ಳದೆ ರಾಜ್ಯದ ಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ, ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಿ ರಾಜೀನಾಮೆ ನೀಡಿರುವುದು ಶೋಭೆಯಲ್ಲ ಎಂದು ಅವರು ಸಲಹೆ ನೀಡಿದರು.

ಶಾಸಕರ ನಡೆಯಿಂದ ಪಕ್ಷ ಮುಜಗರಕ್ಕೊಳಗಾಗಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯವೆಂಬುದನ್ನು ಅರಿಯಬೇಕು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬೆಲೆ ಕೊಡಬೇಕು. ಕೂಡಲೇ ರಾಜೀನಾಮೆ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಚಿಜನಾ ಶ್ರೀಕಾಂತ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ರಾಮಲಿಂಗಯ್ಯ, ಸಿ.ಎಂ.ದ್ಯಾವಪ್ಪ, ಎಂ.ಎಸ್.ಚಿದಂಬರ್, ಎಂ.ಗುರುಪ್ರಸಾದ್, ಇತರ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News