×
Ad

ವೃದ್ದ ದಂಪತಿಯ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿ ಬಂಧನ

Update: 2019-07-09 22:17 IST

ಮಡಿಕೇರಿ, ಜು.9: ವಿರಾಜಪೇಟೆ ಬಳಿಯ ಹಾತೂರು ಗ್ರಾಮದ ವೃದ್ದ ದಂಪತಿ ಕೊಕ್ಕಂಡ ರಾಜು ಅಯ್ಯಪ್ಪ ಹಾಗೂ ಕಮಲ ಎಂಬವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಕಳೆದ ಹನ್ನೊಂದು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎರಡನೇ ಆರೋಪಿ ಎಸ್.ಸಿ.ನಾಗೇಶ್ ಅಲಿಯಾಸ್ ದೊಡ್ಡ (36) ಎಂಬಾತನನ್ನು ಗೋಣಿಕೊಪ್ಪ ಪೊಲೀಸರ ತನಿಖಾ ತಂಡ ಸೋಮವಾರಪೇಟೆ ತಾಲೂಕಿನ ಕರ್ಕಳ್ಳಿಯ ರಾಜು ಎಂಬವರ ಕಾಫಿ ತೋಟದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಕರಣವೇನು ?

2008 ಅಕ್ಟೋಬರ್ 11 ರಂದು ಬೆಳಗ್ಗೆ 10 ಗಂಟೆಗೆ ಹಾತೂರು ಗ್ರಾಮದ ಕೊಕ್ಕಂಡ ರಾಜು ಅಯ್ಯಪ್ಪ ಅವರ ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ಬಿ.ಆರ್.ಸುರೇಶ್ ಹಾಗೂ ನಾಗೇಶ್ ನಗದು ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ ಮೊದಲು ರಾಜು ಅಯ್ಯಪ್ಪ ಅವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡುತ್ತಾರೆ. ನಂತರ ವೃದ್ದೆ ಕಮಲಳನ್ನು ಸ್ಟೋರ್ ರೂಮ್‍ಗೆ ಕಳುಹಿಸಿ ಇಬ್ಬರು ಸೇರಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಹಣ, ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಮೊದಲನೇ ಆರೋಪಿ ಸುರೇಶ್‍ನನ್ನು ಪೊಲೀಸರು ತಕ್ಷಣ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.

ಈ ಜೋಡಿ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ನಾಗೇಶನ ಪತ್ತೆಗಾಗಿ ಗೋಣಿಕೊಪ್ಪ ಪೊಲೀಸರ ತನಿಖಾ ತಂಡ ನಿರಂತರ ಶೋಧ ಕಾರ್ಯ ನಡೆಸಿದರೂ ಆರೋಪಿ ಪತ್ತೆಯಾಗಿರಲಿಲ್ಲ.

ಇದೀಗ ಹನ್ನೊಂದು ವರ್ಷಗಳ ಬಳಿಕ ವಿರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ಸರ್ಕಲ್ ಇನ್ಸ್‍ಪೆಕ್ಟರ್ ದಿವಾಕರ್ ಅವರ ನಿರ್ದೇಶನದಲ್ಲಿ ಸಬ್ ಇನ್ಸ್‍ಪೆಕ್ಟರ್ ಶ್ರೀಧರ್ ಅವರ ನೇತೃತ್ವದಲ್ಲಿ ಸುರೇಂದ್ರ, ನಂಜಪ್ಪ, ಉಮೇಶ್, ಮಹಮ್ಮದ್ ಆಲಿ ಎರಡನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ನಾಗೇಶ್ ಪತ್ನಿ, ಮಕ್ಕಳೊಂದಿಗೆ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿದ್ದನೆಂದು ಡಿವೈಎಸ್‍ಪಿ ನಾಗಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News