×
Ad

ದೇಶದಲ್ಲಿ ಪ್ರಥಮ ಬಾರಿ ಮಹಿಳಾ ಸೈನಿಕ ನೇಮಕಾತಿ ರ‍್ಯಾಲಿ: ಬೆಳಗಾವಿ ಜಿಲ್ಲಾಧಿಕಾರಿ

Update: 2019-07-09 22:45 IST

ಬೆಳಗಾವಿ, ಜು.9: ದೇಶದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಸೈನಿಕರ (ಮಿಲಿಟರಿ ಪೊಲೀಸ್) ನೇಮಕಾತಿ ರ‍್ಯಾಲಿ ಬೆಳಗಾವಿಯಲ್ಲಿ ಜು.22 ರಿಂದ 27ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಮಂಗಳವಾರ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಾದ್ಯಂತ ಒಟ್ಟು ಐದು ಕಡೆಗಳಲ್ಲಿ ಮಹಿಳಾ ಸೇನಾ ಭರ್ತಿ ರ‍್ಯಾಲಿ ನಡೆಸಲಾಗುತ್ತಿದ್ದು, ಅದರಲ್ಲಿ ಬೆಳಗಾವಿಯೂ ಒಂದು. ಬೆಳಗಾವಿಯ ಮರಾಠಾ ಲಘು ಪದಾತಿ ದಳ ಕೇಂದ್ರದ ಆವರಣದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಜು.22 ರಿಂದ 27 ರವರೆಗೆ ನೇಮಕಾತಿ ರ‍್ಯಾಲಿ ನಡೆಯಲಿದೆ ಎಂದು ಬೊಮ್ಮನಹಳ್ಳಿ ಹೇಳಿದರು.

ಅಭ್ಯರ್ಥಿಗಳು ಸಲ್ಲಿಸುವ ಜಾತಿ ಪ್ರಮಾಣ ಪತ್ರಗಳು ಮತ್ತು ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ತಾತ್ಕಾಲಿಕವಾಗಿ ಪರಿಶೀಲನೆ ನಡೆಸಿ, ನೇಮಕಾತಿ ಪ್ರಾಧಿಕಾರದ ಜತೆ ಸಮನ್ವಯ ಸಾಧಿಸಲು ಕಂದಾಯ ಮತ್ತು ಶೈಕ್ಷಣಿಕ ಇಲಾಖೆಯ ಸಿಬ್ಬಂದಿಯನ್ನು ಕೂಡ ನಿಯೋಜಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಬಸ್ ಹಾಗೂ ರೈಲು ನಿಲ್ದಾಣದಲ್ಲಿ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಸೂಕ್ತ ಸಾರಿಗೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುಚ್ಛಕ್ತಿ ಸಂಪರ್ಕವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಒದಗಿಸಬೇಕು ಎಂದು ಅವರು ಸೂಚಿಸಿದರು.

ಎರಡು ಆ್ಯಂಬುಲೆನ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ತಪಾಸಣಾ ಯಂತ್ರೋಪಕರಣಗಳು ಹಾಗೂ ಅಗತ್ಯ ಔಷಧಿಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಒದಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.

ರ್ಯಾಲಿ ವೇಳೆ ನೂಕು ನುಗ್ಗಲು ಉಂಟಾಗದಂತೆ ನಿಯಂತ್ರಿಸಲು ಸ್ಥಳೀಯ ಪೊಲೀಸ್ ಸಿಬ್ಬಂದಿ ನಿಯೋಜನೆ, ಅಭ್ಯರ್ಥಿಗಳಿಗೆ ಪಾವತಿ ಆಧಾರದ ಮೇಲೆ ಉಪಾಹಾರ ಒದಗಿಸುವುದು ಸೇರಿದಂತೆ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಬೊಮ್ಮನಹಳ್ಳಿ ತಿಳಿಸಿದರು.

ದೇಶದಲ್ಲಿ ಪ್ರಥಮ ಬಾರಿ ಮಹಿಳಾ ಸೈನಿಕರ(ಮಿಲಿಟರಿ ಪೊಲೀಸ್) ಭರ್ತಿ ರ‍್ಯಾಲಿ ನಡೆಸಲಾಗುತ್ತಿದ್ದು, ಬೆಳಗಾವಿಯೂ ಒಂದು. ರ‍್ಯಾಲಿಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.

ರ‍್ಯಾಲಿಯಲ್ಲಿ ಒಟ್ಟಾರೆ ಸುಮಾರು ನಾಲ್ಕು ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸೇನಾಧಿಕಾರಿಗಳು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪಎಚ್.ಬಿ., ಸೇನಾ ನೇಮಕಾತಿ ಅಧಿಕಾರಿ ಕರ್ನಲ್ ಪ್ರಣೀತ್ ದಯಾಳ್, ಸ್ಟೇಷನ್ ಕಮಾಂಡರ್ ಬಿ.ಎಸ್ ಘಿವಾರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ಕುಡೊಳ್ಳಿ ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News