ಮಲೆನಾಡಿನಲ್ಲಿ ಮುಂದುವರೆದ ಮಳೆಯ ಆರ್ಭಟ: ಜನಜೀವನ ಅಸ್ತವ್ಯಸ್ತ

Update: 2019-07-09 17:52 GMT

ಚಿಕ್ಕಮಗಳೂರು, ಜು.9: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದೊಂದು ವಾರದಿಂದ ಮಲೆನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲವೆಡೆ ಭೂ ಕುಸಿತದಂತಹ ಘಟನೆಗಳು ವರದಿಯಾಗುತ್ತಿವೆ.

ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೆ, ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಮಲೆನಾಡಿನಲ್ಲಿ ನಿರಂತರ ಮಳೆಯಿಂದಾಗಿ ಇಲ್ಲಿನ ಜೀವನದಿಗಳಾದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಜನ್ನಾಪುರ, ಕಿರುಗುಂದ, ಜಾವಳಿ, ಕಳಸ, ಭಾಗದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಈ ಭಾಗದಲ್ಲಿ ಜನಜೀವನ ಕೊಂಚ ಅಸ್ತವ್ಯಸ್ತವಾಗಿದೆ. ತಾಲೂಕಿನ ಕಳಸ, ಕುದುರೆಮುಖ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಇಲ್ಲಿ ಹರಿಯುವ ಭದ್ರಾ ನದಿಯಲ್ಲಿ ನೀರಿನ ಮಟ್ಟವೂ ಏರುತ್ತಿದೆ. ಮಳೆ ಹೀಗೆಯೇ ಮುಂದುವರಿದಲ್ಲಿ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಇನ್ನೆರಡು ದಿನಗಳಲ್ಲಿ ಮುಳುಗಡೆಯಾಗುವ ಸಂಭವ ಇದೆ. 

ಶೃಂಗೇರಿ ತಾಲೂಕಿನಲ್ಲಿ ಸದ್ಯ ಮಳೆ ಬಿರುಸು ಪಡೆದುಕೊಂಡಿದ್ದು, ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ತಾಲೂಕಿನ ಕಿಗ್ಗಾ, ನೆಮ್ಮಾರ್, ಕೆರೆಕಟ್ಟೆ ಮತ್ತಿತರ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಹರಿಯುವ ತುಂಗಾ ನದಿಯಲ್ಲೂ ನೀರಿನ ಪ್ರಮಾಣದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಉತ್ತಮ ಮಳೆಯಿಂದಾಗಿ ತಾಲೂಕಿನಾದ್ಯಂತ ಅಡಿಕೆ, ಕಾಫಿ, ಭತ್ತದ ಕೃಷಿ ಚಟುವಟಿಕೆಗಳೂ ಗರಿಗೆದರಿವೆ. ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯ ಗಡಿಕಲ್ಲು ಎಂಬಲ್ಲಿ ಧರೆ ಕುಸಿದು ರಸ್ತೆ ಮೇಲೆ ಮಣ್ಣು, ಕಲ್ಲುಗಳು ಉರುಳಿ ವಾಹನಗಳ ಸಂಚಾರಕ್ಕೆ ಕೆಲ ಹೊತ್ತು ಅಡಚಣೆಯಾಗಿದ್ದ ಘಟನೆ ವರದಿಯಾಗಿದೆ.

ಇನ್ನು ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಕೊಪ್ಪ ತಾಲೂಕಿನ ಜಯಪುರ, ಹೇರೂರು, ಬಸರಿಕಟ್ಟೆ, ಮೇಗುಂದ, ಬಿ.ಜಿ.ಕಟ್ಟೆ, ಅಗಳಗಂಡಿ, ಎತ್ತಿನಟ್ಟಿ ಹಾಗೂ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು, ಮಾಗುಂಡಿ, ಎನ್.ಆರ್.ಪುರ ಸೇರಿದಂತೆ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ತಾಲೂಕುಗಳ ವ್ಯಾಪ್ತಿಯಲ್ಲಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಆಲ್ದೂರು, ಮಲ್ಲಂದೂರು, ಶಿರವಾಸೆ, ವಸ್ತಾರೆ, ಆಣೂರು, ಜೋಳ್‍ದಾಳ್ ಗ್ರಾಮಗಳಲ್ಲಿ ಆಗಾಗ್ಗೆ ಮಳೆಯಾಗುತ್ತಿದೆ. ಚಿಕ್ಕಮಗಳೂರು ನಗರದ ವ್ಯಾಪ್ತಿಯಲ್ಲಿ ಪ್ರತಿದಿನ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ.

ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾದ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿ, ಕಡೂರು ತಾಲೂಕು ಹಾಗೂ ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗದಿದ್ದರೂ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಈ ಭಾಗದ ರೈತರನ್ನು ಕಂಗೆಡಿಸಿದೆ. ತರೀಕೆರೆ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗುತ್ತಿದ್ದರೆ, ಕಡೂರು ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿದ್ದು, ತಾಲೂಕಿನ ಕೆಲವೆಡೆ ತುಂತುರು ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಈ ಭಾಗದಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಕೃಷಿ ಚಟವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ.

ಒಟ್ಟಾರೆ ಕಾಫಿನಾಡಿನಲ್ಲಿ ಕಳೆದ ಬಾರಿ ಭಾರೀ ಮಳೆಯಿಂದಾಗಿ ಅತೀವೃಷ್ಟಿ ಉಂಟಾಗಿದ್ದು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಬಯಲುಸೀಮೆ ಭಾಗದಲ್ಲಿ ಮಾತ್ರ ಮಳೆಯ ಕಣ್ಣಾಮುಚ್ಚಾಲೆ ಆಟ ಈ ಬಾರಿಯೂ ಮುಂದುವರಿದಿದೆ. ಮಲೆನಾಡು ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗಿದ್ದರೂ ಯಾವುದೇ ಆಸ್ತಿಪಾಸ್ತಿ ನಷ್ಟ ಅಥವಾ ಜನಜಾನುವಾರುಗಳ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಲೆನಾಡು ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟ ಪ್ರತಿದಿನ ನಡೆಯುತ್ತಿದೆ. ಮಲೆನಾಡು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಬೆಳಗ್ಗೆ ಮತ್ತು ಸಂಜೆ ವೇಳೆ ಧಾರಾಕಾರವಾಗಿ ಮಳೆಯಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News