ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರಿಂದ ಧರಣಿ

Update: 2019-07-09 18:00 GMT

ಚಿಕ್ಕಮಗಳೂರು, ಜು.9: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಮಂಗಳವಾರ ನಗರದಲ್ಲಿ ಬೀದಿಗಿಳಿದು ಧರಣಿ ನಡೆಸಿದರು.

ನಗರದ ತಾಲೂಕು ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಮಂದಿ ಶಿಕ್ಷಕರು ಆಝಾದ್ ವೃತ್ತದಲ್ಲಿ ಸಮಾವೇಶಗೊಂಡು ಸಮ್ಮಿಶ್ರ ಸರಕಾರ ಶಿಕ್ಷಕರ ಬೇಡಿಕೆಗಳ ಈಡೇರಿಸುವಲ್ಲಿ ವಿಫಲವಾಗಿದೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. 

ಈ ವೇಳೆ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಶಿಕ್ಷಕರ ಸಂಘದ ಮುಖಂಡರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ 2 ಹಂತದಲ್ಲಿ ಪ್ರತಿಭಟನೆ ನಡೆಸಿದ್ದರೂ ರಾಜ್ಯ ಸರಕಾರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತಾರ್ಕಿಕ ಅಂತ್ಯ ತಲುಪಿಸುವಲ್ಲಿ ಚಿಂತನೆ ನಡೆಸಲಾಗಿದೆ. ಬೇಡಿಕೆಗಳ ಈಡೇರಿಕೆಗಾಗಿ ಎಂತಹ ಹೋರಾಟಕ್ಕೂ ಶಿಕ್ಷಕರು ಸಿದ್ಧರಿದ್ದಾರೆ ಎಂದ ಅವರು, 2014ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು 1ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸಿದ ಆದೇಶವನ್ನು ತಕ್ಷಣ ರದ್ದುಗೊಳಿಸಿ, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗಧಿಗೊಳಿಸಬೇಕೆಂದು ಒತ್ತಾಯಿಸಿದರು.

ಕಳೆದ 3 ವರ್ಷಗಳಿಂದ ಶಿಕ್ಷಕರ ವರ್ಗಾವಣೆಯಾಗದಿರುವುದರಿಂದ 3 ವರ್ಷದ ಒಟ್ಟು ಶೇಕಡವಾರು ಪರಿಗಣಿಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು, ಹಾಗೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸುವಂತೆ ಆಗ್ರಹಿಸಿದ ಮುಖಂಡರು, ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಗಳಲ್ಲಿ ನ್ಯೂನತೆ ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು, ಶಿಕ್ಷಕ : ವಿದ್ಯಾರ್ಥಿ ಅನುಪಾತ ಗುರ್ತಿಸುವಾಗ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರುಗಳನ್ನು ಹೊರತುಪಡಿಸಿ ಹಾಗೂ ಮಾಧ್ಯಮವಾರು ಪ್ರಾದೇಶಿಕವಾರು ವಿಶೇಷ ನಿಯಮಗಳನ್ನು ರೂಪಿಸಿ ಹೆಚ್ಚುವರಿ ಪ್ರಕ್ರಿಯೆಗಳನ್ನು ಮಾಡಬೇಕು. 6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸಿನ ಪ್ರಕಾರ ಮುಖ್ಯೋಪಾಧ್ಯಯರಿಗೆ 10, 15, 20, 25, 30 ವರ್ಷದ ಭಡ್ತಿಗಳನ್ನು ನೀಡಬೇಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಯವರೆಗೂ ಭಡ್ತಿ ನೀಡಬೇಕೆಂದು ಹೇಳಿದರು.

ಧರಣಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರೇಶ್, ಸಂಘಟನೆಯ ಮುಖಂಡರಾದ ಎ.ಎಲ್.ನಾರಾಯಣ್, ದೇವರಾಜಪ್ಪ, ಕೆಂಚೇಗೌಡ, ನಾಗೇಗೌಡ, ಉಮಾದೇವಿ, ವಿಲ್ಮಾ, ನಾಗಾಮಣಿ, ಪರಮೇಶ್ವರಪ್ಪ, ಕಿರಣ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News