×
Ad

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಿನಲ್ಲಿ ಶಿಕ್ಷಕರ ಧರಣಿ

Update: 2019-07-09 23:35 IST

ಮೈಸೂರು,ಜು.9: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ರಾಜ್ಯದಲ್ಲಿರುವ 50,066 ಶಾಲೆಗಳಲ್ಲಿನ ಕಾರ್ಯ ಸ್ಥಗಿತಗೊಳಿಸಿ ಬಂದ್ ಮಾಡಿದ್ದು, ಮೈಸೂರಿನಲ್ಲಿಯೂ ಮೈಸೂರು ಜಿಲ್ಲಾ ಶಿಕ್ಷಕರು ಬಂದ್ ಗೆ ಬೆಂಬಲ ನೀಡಿ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ, ಕಾಲಕಾಲಕ್ಕೆ ವರ್ಗಾವಣೆ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಲಾ ಶಿಕ್ಷಕರು ಶಾಲೆಗಳನ್ನು ಮುಚ್ಚಿ ಇಂದು ಆಯಾ ಮೈಸೂರು ಜಿಲ್ಲಾ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಇತ್ತೀಚೆಗೆ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳೊಂದಿಗೆ ಪ್ರಾಥಮಿಕ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ, ಸಭೆಯಲ್ಲಿ ಸಚಿವರು ಸಕರಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. 2014ಕ್ಕಿಂತ ಮೊದಲು ನೇಮಕವಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಭಡ್ತಿ ನೀಡಬೇಕು. ಇಲ್ಲವಾದಲ್ಲಿ ಸರ್ಕಾರದ ನೂತನ ನಿಯಮದಿಂದ 10ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಅನುಭವ-ಅರ್ಹತೆ ಇರುವವರು ಅವಕಾಶ ವಂಚಿತರಾಗುತ್ತಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಎಂಬುವುದು ಸೇರಿ ಹಲವಾರು ಬೇಡಿಕೆಗಳಿದ್ದು ಅವುಗಳನ್ನು ಈಡೇರಿಸಬೇಕು ಎಂದರು.

ವರ್ಗಾವಣೆ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು. 2008ರ ನಂತರ ನೇಮಕವಾಗಿರುವ ಶಿಕ್ಷಕರಿಗೆ ವಾರ್ಷಿಕ ಒಂದು ವಿಶೇಷ ವೇತನ ಭಡ್ತಿ ನೀಡಬೇಕು. ಕಾಲಕಾಲಕ್ಕೆ ವರ್ಗಾವಣೆ ನಡೆಸುವುದು, ಪದವೀಧರ ಶಿಕ್ಷಕರಿಗೆ ಆರರಿಂದ ಎಂಟನೇ ತರಗತಿಗೆ ಭಡ್ತಿ ನೀಡುವುದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ 50:1ಕ್ಕೆ ನಿಗದಿ ಮಾಡುವುದು, ಎನ್ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವುದು, ಕೃಪಾಂಕ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಸೋಮೇಗೌಡ, ಜಿಲ್ಲಾ ಉಪಾಧ್ಯಕ್ಷ ಹೆಚ್.ಎಸ್.ಮಹೇಶ್, ಮಮತಾ, ಕೌಸಲ್ಯಾ, ಸೇರಿದಂತೆ ಹಲವಾರು ಶಿಕ್ಷಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News